ಬೆಂಗಳೂರು: ರವಿವಾರದಂದು ಮೆಟ್ರೋ ರೈಲು ಸಂಚಾರ ಬೆಳಗ್ಗೆ 7ಕ್ಕೆ ಪ್ರಾರಂಭಿಸಲು ಚಿಂತನೆ

ಬೆಂಗಳೂರು, ಡಿ.4: ನಗರದಲ್ಲಿ ಮೆಟ್ರೋ ರೈಲು ಸಂಚಾರ ರವಿವಾರದಂದು ಬೆಳಗ್ಗೆ 8ರ ಬದಲಿಗೆ 7ಕ್ಕೆ ಪ್ರಾರಂಭಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೆಟ್ರೋ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ವೈ.ಚವ್ಹಾಣ್ ತಿಳಿಸಿದ್ದಾರೆ.
ಮೆಟ್ರೋ ರೈಲು ಸಂಚಾರ ರವಿವಾರ ಹೊರತು ಪಡಿಸಿ ಉಳಿದ ವಾರಗಳು ಬೆಳಗ್ಗೆ 5.30ಕ್ಕೆ ಪ್ರಾರಂಭವಾಗುತ್ತಿವೆ. ಆದರೆ, ರವಿವಾರ ಮಾತ್ರ ಬೆಳಗ್ಗೆ 8 ಪ್ರಾರಂಭವಾಗುತ್ತಿದೆ. ಇದರಿಂದ ದೂರದ ಊರುಗಳಿಂದ ಬೆಂಗಳೂರಿಗೆ ಸುತ್ತಾಡಲು ಬರುವ ಪ್ರವಾಸಿಗರಿಗೆ ಸಮಸ್ಯೆಗಳಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಬೆಳಗ್ಗೆ 8ರ ಬದಲಿಗೆ 7ಕ್ಕೆ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರೈಲುಗಳ ನಿರ್ವಹಣೆ, ಹಳಿಗಳ ತಪಾಸಣೆ, ತಾಂತ್ರಿಕ ಪರಿಶೀಲನೆ, ಸುರಕ್ಷತಾ ವ್ಯವಸ್ಥೆ ನಿರ್ವಹಣೆ, ದುರಸ್ತಿಗಾಗಿ ಸಮಯ ಬೇಕಾಗುತ್ತದೆ. ಅದಕ್ಕಾಗಿ ವಾರದಲ್ಲಿ ಒಂದು ದಿನ ರೈಲು ಸಂಚಾರವನ್ನು ವಿಳಂಬವಾಗಿ ಆರಂಭಿಸಲಾಗುತ್ತಿದೆ. ಆದರೆ, ಪ್ರಯಾಣಿಕ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.





