ಬಿಜೆಪಿಯ ಸೂಚನೆಯಂತೆ 30 ಲಕ್ಷ ಮತದಾರರ ಹೆಸರು ಅಳಿಸಿದ ಚುನಾವಣಾ ಆಯೋಗ
ಆಪ್ ಆರೋಪ

ಹೊಸದಿಲ್ಲಿ,ಡಿ.4: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಬಿಜೆಪಿಯನ್ನು ವಿರೋಧಿಸಬಹುದಾದ ಸಮುದಾಯಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪಿಸಿದೆ.
ಬಿಜೆಪಿಯ ಸೂಚನೆಯಂತೆ ಭಾರತೀಯ ಚುನಾವಣಾ ಆಯೋಗವು 30 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ ಎಂದು ಆಪ್ ನಾಯಕಿ ಮತ್ತು ಪೂರ್ವ ದಿಲ್ಲಿಯ ಲೋಕಸಭಾ ಕ್ಷೇತ್ರ ಉಸ್ತುವಾರಿ ಆತಿಶಿ ಆರೋಪಿಸಿದ್ದಾರೆ. ಹೀಗೆ ಅಳಿಸಿ ಹಾಕಲ್ಪಟ್ಟ ಬಹುತೇಕ ಮತದಾರರು ಬಿಜೆಪಿಯಿಂದ ಹತಾಶೆಗೊಳಗಾದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆಯೋಗವು ತನ್ನ ಜಾಲತಾಣದಲ್ಲಿ ಅಳಿಸಿ ಹಾಕಿರುವ ಹೆಸರುಗಳ ಅಸಂಪೂರ್ಣ ಪಟ್ಟಿಯನ್ನು ನೀಡಿದ್ದು ಇದರಲ್ಲಿ ಬನಿಯಾ, ಪೂರ್ವಾಂಚಲಿ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಹೆಸರುಗಳೇ ಹೆಚ್ಚಾಗಿದೆ ಎಂದು ಆತಿಶಿ ಆರೋಪಿಸಿದ್ದಾರೆ.
ಪೂರ್ವ ದಿಲ್ಲಿಯಲ್ಲಿ ಮೂರು ಲಕ್ಷ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಈ ಪೈಕಿ 75,000 ಬನಿಯಾ ಸಮುದಾಯದ, 70,000 ಮುಸ್ಲಿಂ ಮತ್ತು 1.14 ಲಕ್ಷ ಪೂರ್ವಾಂಚಲಿ ಸಮುದಾಯಕ್ಕೆ ಸೇರಿದ ಮತದಾರರಿದ್ದಾರೆ. ಈ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಆಕೆ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ದಿಲ್ಲಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವವರ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಿದೆ. ಆಪ್ ದಿಲ್ಲಿಯ ಪ್ರತಿ ಮನೆಗೆ ತೆರಳಿ ಹೆಸರು ಅಳಿಸಿ ಹಾಕಲ್ಪಟ್ಟ ಮತದಾರರಿಗೆ ಫಾರ್ಮ್6 ನೀಡಲಿದೆ. ಇದರಿಂದ ಅವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಮತ್ತೆ ಸೇರಿಸಲು ಸಾಧ್ಯವಾಗಲಿದೆ ಎಂದು ಆತಿಶಿ ತಿಳಿಸಿದ್ದಾರೆ.







