ಮಾನವ-ಆನೆ ಸಂಘರ್ಷ ತಡೆ: ಶಾಶ್ವತ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಡಿ. 4: ರಾಜ್ಯದಲ್ಲಿ ಮಾನವ ಮತ್ತು ಆನೆ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಅಗತ್ಯ ಪ್ರಸ್ತಾವವನ್ನು ಸಿದ್ಧಪಡಿಸಿ, ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿಯಿಂದ ತೊಂದರೆಗೊಳಗಾದವರ ಸಮಸ್ಯೆಗಳು-ಪರಿಹಾರೋಪಾಯಗಳ ಕುರಿತು ಚರ್ಚಿಸಲಾಯಿತು.
ಆನೆಗಳ ಹಾವಳಿಯಿಂದ ಭತ್ತ, ಅಡಿಕೆ, ಕಾಫಿ ಬೆಳೆಗಳಿಗೆ ಹಾನಿಯುಂಟಾಗಿದ್ದು, ಮಾನವ-ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕವಾಗಿ ಪರಿಹಾರ ಕೈಗೊಳ್ಳಬೇಕೆಂದು ರೈತರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಷ್ಟ್ರದಲ್ಲಿಯೆ ಅತಿಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು 6 ಸಾವಿರ ಆನೆಗಳು ರಾಜ್ಯದಲ್ಲಿದ್ದು, ಆನೆಗಳ ಹಾವಳಿಯನ್ನು ತಡೆಯಲು ತೊಂದರೆಯುಂಟು ಮಾಡುತ್ತಿರುವ ಆನೆಗಳನ್ನು ಹಿಡಿದು ಶಿಬಿರಗಳಿಗೆ ಕಳುಹಿಸುವುದಕ್ಕೆ ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಸೂಚಿಸಿದರು.
ಆನೆ ಹಾವಳಿ ತಡೆಗೆ ಈವರೆಗೆ 71 ಕಿ.ಮಿ ರೈಲು ತಡೆಗೋಡೆ ನಿರ್ಮಾಣವಾಗಿದ್ದು, ಆಯವ್ಯಯದಲ್ಲಿ ಮೀಸಲಿಟ್ಟಿರುವ 50ಕೊಟಿ ರೂ. ಅನುದಾನದಲ್ಲಿ ಅಗತ್ಯವಿರುವ 400 ರಿಂದ 500 ಕಿ.ಮಿ ತಡೆಗೋಡೆ ನಿರ್ಮಾಣಕ್ಕೆ ಸಾಲದು. ಹೀಗಾಗಿ 3-4 ವರ್ಷಗಳಿಗೆ ಅಗತ್ಯವಿರುವ ಹಣಕಾಸಿನ ನೆರವಿನ ಕುರಿತು ಪ್ರಸ್ತಾವ ಸಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದರು.
ರೈಲ್ವೆ ಇಲಾಖೆಯಿಂದ ಕಂಬಿ ಖರೀದಿಗೆ ಬೆಲೆ ದುಬಾರಿಯಾಗಿದ್ದು, ಬೇರೆ ಪ್ರದೇಶಗಳಿಂದ ಕಂಬಿ ಸಾಗಾಣಿಕೆ ಮಾಡಬೇಕಾಗಿರುವುದರಿಂದ ಸಾರಿಗೆ ವೆಚ್ಚವೂ ಸೇರುತ್ತದೆ. ಆದುದರಿಂದ ರಿಯಾಯಿತಿ ಬೆಲೆಯಲ್ಲಿ ರೈಲು ಕಂಬಿ ನೀಡುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಬೇಕು ಎಂದು ಕುಮಾರಸ್ವಾಮಿ ನಿರ್ದೇಶನ ನೀಡಿದರು.
ರೈಲು ತಡೆಗೋಡೆಗಳ ನಿರ್ಮಾಣ ಸಂಬಂಧ ವಿಸ್ತೃತ ಪ್ರಸ್ತಾವ ಸಿದ್ಧಪಡಿಸಬೇಕು. ಈ ಕುರಿತು ಹೊಸದಿಲ್ಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ನೆರವು ನೀಡಲು ಮನವಿ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಸಭೆಯಲ್ಲಿ ಹಾಸನ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ, ಅರಣ್ಯ ಸಚಿವ ಆರ್. ಶಂಕರ್, ಪರಿಷತ್ ಸದಸ್ಯ ಎಸ್.ಎಲ್.ಭೋಜರಾಜು, ಶಾಸಕ ಆರಗ ಜ್ಞಾನೇಂದ್ರ, ಅರಣ್ಯ ಸಂರಕ್ಷಣಾಧಿಕಾರಿ ಪುನ್ನತಿ ಶ್ರೀಧರ್, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಇನ್ನಿತರರು ಹಾಜರಿದ್ದರು.







