ಬೀಡಿ ಕಾರ್ಮಿಕರ ಮೇಲೆ ನಡೆಯುವ ವಂಚನೆ: ತನಿಖೆಗೆ ರಾಜನ್ ಆಗ್ರಹ

ಮಂಗಳೂರು/ಬೆಂಗಳೂರು, ಡಿ.4: ಬೀಡಿ ಕಾರ್ಮಿಕರಿಗೆ ಕಾನೂನು ಸವಲತ್ತು ಕಾರ್ಮಿಕರಿಗೆ ತಲುಪದೇ ಬೀಡಿ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಸರಕಾರ ಸವಲತ್ತು ನೀಡಿದರೂ ಹೊರದೇಶದಲ್ಲಿ ಮಾಲಕರ ಜೊತೆ ಒಪ್ಪಂದ ಮಾಡಿ ಸವಲತ್ತನ್ನು ಬಿಟ್ಟುಕೊಡುವ ಕೆಲವು ಕಾರ್ಮಿಕ ವಿರೋಧಿಗಳಿಂದ ಕಾರ್ಮಿಕರು ಬಲಿಪಶುವಾಗಿದ್ದಾರೆ. ಇದರ ತನಿಖೆ ನಡೆಸಬೇಕಿದೆ ಎಂದು ರಾಜ್ಯದ ಹಿರಿಯ ಕಾರ್ಮಿಕ ಮುಖಂಡ ಇ.ಕೆ.ಎನ್ ರಾಜನ್ ಆಗ್ರಹಿಸಿದರು.
ಬೆಂಗಳೂರು ಕಾರ್ಮಿಕ ಆಯುಕ್ತರ ಕಚೇರಿ ಎದುರು ದ.ಕ. ಜಿಲ್ಲಾ ಬೀಡಿ ಕಾರ್ಮಿಕ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಬೀಡಿ ಕಾರ್ಮಿಕರು ಸರಕಾರ ನಿಗದಿಗೊಳಿಸಿದ ಕನಿಷ್ಠ ಕೂಲಿ 1,000 ಬೀಡಿಗೆ 220.52 ರೂ. ಜಾರಿ, 2015ರಿಂದ ಬಾಕಿಯಾದ ಡಿ.ಎ. ತಲಾ 11,934, ಹಾಗೂ ಕಾನೂನು ಬದ್ಧ ಹಕ್ಕಾದ ಗ್ರಾಚ್ಯುವಿಟಿ ಪಾವತಿಗಾಗಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿ.ಎಂ.ಭಟ್ ಅವರಂತಹ ನಾಯಕತ್ವದಲ್ಲಿ ನಡೆಯುವ ಈ ನ್ಯಾಯಬದ್ಧ ಹೋರಾಟ ಯಶಸ್ವಿಯಾಗಲಿ, ಕಾರ್ಮಿಕ ದ್ರೋಹಿಗಳನ್ನು ಜಿಲ್ಲೆಯಲ್ಲಿ ಕಾಲೂರಲು ಬಿಬಾರದು ಎಂದು ಸಲಹೆ ನೀಡಿದ ಅವರು, ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಯಲಿದೆ ಎಂದರು.
ಪ್ರಜಾರಂಗದ ಮುಖಂಡ ಅಸ್ತ್ರ ಆದಿತ್ಯ ಹೋರಾಟವನ್ನು ಬೆಂಬಲಿಸಿ ಮಾತಾಡುತ್ತಾ, ಕಾರ್ಮಿಕರಿಗೆ ಆಗುವ ವಂಚನೆಯನ್ನು ಕಾರ್ಮಿಕ ಇಲಾಖೆ, ಸರಕಾರ ಕಣ್ಣು ಮುಚ್ಚಿ ಕುಳಿತು ಪರೋಕ್ಷವಾಗಿ ಮಾಲಕರ ಹಿತ ಕಾಪಾಡುತ್ತಿದೆ ಎಂದು ಟೀಕಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಸರಕಾರ ನಿಗದಿಗೊಳಿಸಿದ ಡಿ.ಎ. ಕನಿಷ್ಠ ಕೂಲಿಗಳು 2006ರಿಂದ ನಿರಂತರ ವಂಚನೆಯಾಗಲು ಕಾರಣ ಏನೆಂಬುದನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೂಗೊಳ್ಳಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ವಿಶ್ವಾಸ ಕಳಕ್ಕೊಂಡ ದ.ಕ. ಜಿಲ್ಲೆಯ ಕಾರ್ಮಿಕ ಚಳವಳಿ ಇಂದು ಜಿಲ್ಲೆಯಲ್ಲಿ ಕೋಮುವಾದಿಗಳ ಬೆಳವಣಿಗೆಗೆ ಅವಕಾಶ ಮಾಡಿ ಕೊಟ್ಟಂತಾಗಿದೆ. ಮಾಲಕರ ಏಜೆಂಟರ ಮೂಲಕ ಕಾರ್ಮಿಕರ ಸದಸ್ಯತ್ವ ಮಾಡಿಸುವ ಕೆಲವು ಕಾರ್ಮಿಕ ಸಂಘಗಳ ದೆಸೆಯಿಂದ ಎಡಚಳವಳಿಗೂ ಹೊಡೆತ ಬಿದ್ದಿದೆ ಎಂದು ತಿಳಿಸಿದರು.
ರಾಜ್ಯದ ಬಹುಸಂಖ್ಯಾತ ಕಾರ್ಮಿಕ ವರ್ಗವಾದ ಬೀಡಿ ಕಾರ್ಮಿಕರ ಶೋಷಣೆಯ ತಡೆಯಲು ಮುಂದಾಗದೆ ಮಾಲಕರಿಂದ ಹಣ ಸಂಗ್ರಹಿಸಿ ಕಾರ್ಮಿಕರ ಸದಸ್ಯತ್ವ ಮಾಡಿಸುವವರ ಹಿಡಿತದ ನಾಯಕತ್ವದಿಂದ ಕಾರ್ಮಿಕರಿಗಷ್ಟೇ ಅಲ್ಲ, ರಾಜ್ಯದ ಎಡಚಳವಳಿಗೂ ಹೊಡೆತ ಬಿದ್ದಿದೆ. ಕಾರ್ಮಿಕರ ವಂಚನೆ ನಿಲ್ಲುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಹೋರಾಟದಲ್ಲಿ ಪ್ರಮುಖರಾದ ನೆಬಿಸಾ, ಲೋಕೇಶ್ ಕುದ್ಯಾಡಿ, ನಾರಾಯಣ ಕೈಕಂಬ, ಜಯರಾಮ ಮಯ್ಯ, ಗುಡ್ಡಪ್ಪ ಗೌಡ, ಕೇಶವ ಗೌಡ, ಜಯಶ್ರೀ, ರಾಮಚಂದ್ರ, ಸಂಜೀವ ನಾಯ್ಕ, ಪುಷ್ಪಾ, ಧನಂಜಯ ಗೌಡ, ಡೊಂಬಯ ಗೌಡ ಮೊದಲಾದವರು ಇದ್ದರು. ಕ್ರಾಂತಿ ಗೀತೆ, ಘೋಷಣೆಗಳು ಹೋರಾಟದ ಮೆರುಗನ್ನು ಹೆಚ್ಚಿಸಿತ್ತು. ಸಂಘದ ಕಾರ್ಯದರ್ಶಿ ಈಶ್ವರಿ ಸ್ವಾಗತಿಸಿದರು. ಶ್ಯಾಮರಾಜ ಪಟ್ರಮೆ ವಂದಿಸಿದರು.
‘ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ’
2019ರ ಜನವರಿ 8 ಮತ್ತು 9ರಂದು ನಡೆಯಲಿರುವ ಕಾರ್ಮಿಕರ ಅಖಿಲ ಭಾರತ ಮುಷ್ಕರಕ್ಕೆ ಬೀಡಿ ಕಾರ್ಮಿಕರ ಸಂಪೂರ್ಣ ಬೆಂಬಲ ಇದೆ ಎಂದು ಸಂಘಟನೆಯ ಪ್ರಮುಖ ಬಿ.ಎಂ.ಭಟ್ ಘೋಷಿಸಿದರು.
ಬೀಡಿ ಕಾರ್ಮಿಕರಿಗೆ ಮಾಲಕರಿಂದ ಹಾಗೂ ಸರಕಾರದ ನಡೆಯಿಂದ ಆಗುವ ಅನ್ಯಾಯವನ್ನು ಪ್ರತಿಭಟಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನೀಡಿದ ಕರೆಯಂತೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ, ಬೆಲೆ ಏರಿಕೆ, ಇತ್ಯಾದಿಗಳನ್ನು ಖಂಡಿಸುತ್ತಾ, ಕನಿಷ್ಠ ಕೂಲಿ, ಕೆಲಸದ ಭದ್ರತೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ನಡೆಯಲಿರುವ ಕಾರ್ಮಿಕರ ಅಖಿಲ ಭಾರತ ಮುಷ್ಕರದಲ್ಲಿ ಬೀಡಿ ಕಾರ್ಮಿಕರು ಭಾಗವಹಿಸಿ ಯಶಸ್ವಿಗೊಳಿಸಲು ಶ್ರಮಿಸಿಲಿದ್ದಾರೆ ಎಂದು ಘೋಷಿಸಲಾಯಿತು.