ಮಂಗಳೂರು ವಿವಿಗೆ ಚಿನ್ನ: ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆ
ದಕ್ಷಿಣ ವಲಯ ಅಂತರ್‌ವಿವಿ ಮಹಿಳೆಯರ ಹಾಕಿ ಪಂದ್ಯಾಟ

ಮಂಗಳೂರು, ಡಿ.4: ತಮಿಳುನಾಡಿನ ಅಳಗಪ್ಪ ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 28ರಿಂದ ಡಿಸೆಂಬರ್ 2ರತನಕ ನಡೆದ ದಕ್ಷಿಣ ವಲಯ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಿನ್ನದ ಪದಕ ಪಡೆದು ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆ ಹೊಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾಲಯವನ್ನು 4-1 ಗೋಲುಗಳಿಂದ ಸೋಲಿಸಿ ಲೀಗ್ ಮಟ್ಟಕ್ಕೆ ಅರ್ಹತೆಯನ್ನು ಪಡೆಯಿತು.
ಲೀಗ್ ಪಂದ್ಯಾವಳಿಯ ಪ್ರಥಮ ಪಂದ್ಯಾಟದಲ್ಲಿ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದೊಂದಿಗೆ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಎರಡನೇ ಪಂದ್ಯದಲ್ಲಿ ಅಳಗಪ್ಪ ವಿಶ್ವವಿದ್ಯಾನಿಲಯದೊಂದಿಗೆ 1-0 ಗೋಲುಗಳಲ್ಲಿ ಜಯ ಪಡೆದು ಲೀಗ್‌ನ ಕೊನೆಯ ಪಂದ್ಯದಲ್ಲಿ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದ ಎದುರು 2-0 ಗೋಲುಗಳ ಜಯ ಪಡೆದು ಚಿನ್ನದ ಪದಕವನ್ನು ಪಡೆಯಿತು.
ಪಂದ್ಯಾವಳಿಯಲ್ಲಿ ಅಣ್ಣಾ ವಿಶ್ವವಿದ್ಯಾನಿಲಯವು ದ್ವಿತೀಯ, ಕ್ಯಾಲಿಕಟ್ ವಿಶ್ವವಿದ್ಯಾನಿಲಯ, ತೃತೀಯ ಹಾಗೂ ಅಳಗಪ್ಪವಿಶ್ವವಿದ್ಯಾನಿಲಯ ಚತುರ್ಥ ಸ್ಥಾನವನ್ನು ಪಡೆದಿದೆ. ಮಂಗಳೂರು ವಿಶ್ವವಿದ್ಯಾಲಯದ ಮಹಿಳೆಯರ ತಂಡದಲ್ಲಿ ಪೂಜಾ ಎಂ.ಡಿ. (ತಂಡದ ನಾಯಕಿ), ನಿಶಾ ಪಿ.ಸಿ., ಚೆಲುವಾಂಬಾ ಆರ್., ಲೀಲಾವತಿ, ಕುಮುದಾ, ನಿವೇದಿತಾ ಎನ್., ಕೀರ್ತನ ಎಂ.ಎಸ್., ಮಿಲನ ಕೆ.ಪಿ., ಪವಿತ್ರ ಪಿ.ಎ., ವಿದ್ಯಾ ಕೆ.ಎಸ್., ಪ್ರಿಯದರ್ಶಿನಿ, ಸಂಗೀತಾ ಸಿ.ಜೆ. ಅನ್ನಪೂರ್ಣ ಆರ್., ಪಾರ್ವತಿ ಎಂ., ಮೀನಾ ಟಿ. ಚೈತ್ರಾ ಕೆ.ಜೆ., ನಿರೀಕ್ಷಾ ಮತ್ತು ಹಿಮಾ ಜಾರ್ಜ್, ತಂಡದ ತರಬೇತುದಾರ ನಾಚಪ್ಪ ಹಾಗೂ ತಂಡದ ವ್ಯವಸ್ಥಾಪಕಿ ರಾಖಿ ಪೂವಣ್ಣ ಕಾರ್ಯ ನಿರ್ವಹಿಸಿದರು.