ಬೆಂಗಳೂರಿನಲ್ಲಿ ಸೌದಿ ಅರೇಬಿಯಾ ಕಾನ್ಸುಲೆಟ್ ಕಚೇರಿ: ಮುಖ್ಯಮಂತ್ರಿ ಸ್ವಾಗತ

ಬೆಂಗಳೂರು, ಡಿ.4: ಬೆಂಗಳೂರಿನಲ್ಲಿ ಸದ್ಯದಲ್ಲಿಯೆ ಸೌದಿ ಅರೇಬಿಯಾ ಕಾನ್ಸುಲೆಟ್ ಕಚೇರಿ ಪ್ರಾರಂಭವಾಗುತ್ತಿರುವುದನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಸೌದಿ ಅರೇಬಿಯಾದ ರಾಯಭಾರಿ ಡಾ.ಸೌದ್ ಮುಹಮ್ಮದ್ ಎ.ಅಲ್-ಸತಿ ಈ ವಿಷಯವನ್ನು ಮುಖ್ಯಮಂತ್ರಿಗೆ ತಿಳಿಸಿದರು.
ಪ್ರವಾಸೋದ್ಯಮ ಹಾಗೂ ಮೂಲ ಸೌಲಭ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಉದ್ಯಮಿಗಳು ಆಸಕ್ತಿ ತೋರಿದರೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೂ ಮುಂದಾಗುವಂತೆ ಸಲಹೆ ನಿಡಿದರು.ಬೆಂಗಳೂರು ಮತ್ತು ಸೌದಿ ಅರೇಬಿಯಾ ನಡುವೆ ಪ್ರಯಾಣ ಮಾಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸೌದಿ ಅರೇಬಿಯಾಗೆ ವೀಸಾ ಕೋರುವವರ ಸಂಖ್ಯೆಯೂ ದುಪ್ಪಟ್ಟುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಕಾನ್ಸುಲೆಟ್ ಕಚೇರಿ ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸೌದಿ ಅರೇಬಿಯಾದ ರಾಯಭಾರಿಗಳು ಮುಖ್ಯಮಂತ್ರಿಗೆ ತಿಳಿಸಿದರು.
ಸೌಲತ್ ಉನ್ನಿಸಾ ಎಂಬ ಬೆಂಗಳೂರಿನ ಮಹಿಳೆ ಮಕ್ಕಾದಲ್ಲಿ 100 ವರ್ಷಗಳ ಹಿಂದೆ ಬಾಲಕಿಯರ ಶಾಲೆಯೊಂದನ್ನು ತೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಿದೆ. ಅವರ ಪೂರ್ವಜರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿ ಇದೆ. ಅವರ ಬಗ್ಗೆ ಮಾಹಿತಿ ಒದಗಿಸಿದರೆ, ಅವರ ಕುಟುಂಬವನ್ನು ಗೌರವಿಸಲಾಗುವುದು ಎಂದು ಕಾನ್ಸುಲೆಟ್ ಜನರಲ್ ತಿಳಿಸಿದರು. ಬೆಂಗಳೂರಿನ ಹವಾಮಾನ ಹಾಗೂ ಮೂಲಸೌಲಭ್ಯಗಳ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ರೋಷನ್ ಬೇಗ್ ಉಪಸ್ಥಿತರಿದ್ದರು.







