ಕುಖ್ಯಾತ ಕ್ರಿಮಿನಲ್ ಜೊತೆ ಸಿಸಿಬಿ ಪೊಲೀಸ್ ಸಂಪರ್ಕ ?
ಇಲಾಖಾ ತನಿಖೆಗೆ ಮಂಗಳೂರು ಪೊಲೀಸ್ ಆಯುಕ್ತರು ಆದೇಶ

ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್
ಮಂಗಳೂರು, ಡಿ.4: ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಕ್ರಿಮಿನಲ್ ಕೇರಳ ಮಂಜೇಶ್ವರದ ತಲಕಿ ರಫೀಕ್ ಜತೆ ನಗರ ಅಪರಾಧ ಪತ್ತೆದಳ (ಸಿಸಿಬಿ) ಕಾನ್ಸ್ಟೇಬಲ್ ಚಂದ್ರ ಎಂಬವರು ಹಣಕಾಸಿನ ವಿಚಾರದಲ್ಲಿ ಮೊಬೈಲ್ ಮೂಲಕ ನಡೆಸಿರುವ ಮಾತುಕತೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಪಾತಕಿ ತಲಕಿ ರಫೀಕ್ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳಿವೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನಿಗೆ ಬೇಕಾದವರ ಅಥವಾ ವಿರೋಧಿ ಗ್ಯಾಂಗ್ನ ಸದಸ್ಯರ ಮೊಬೈಲ್ ಲೊಕೇಶನ್ ಮಾಹಿತಿ, ವ್ಯಕ್ತಿಗಳ ಹಿನ್ನೆಲೆ ಸೇರಿದಂತೆ ಪೊಲೀಸ್ ಇಲಾಖೆಯ ಕೆಲವೊಂದು ಗೌಪ್ಯ ಮಾಹಿತಿಗಳನ್ನು ಚಂದ್ರ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಬಹಿರಂಗಗೊಂಡಿರುವ ಆಡಿಯೊ ಮಲೆಯಾಳಂ ಭಾಷೆಯಲ್ಲಿದ್ದು, ಮೊಬೈಲ್ ಲೊಕೇಶನ್ ನೀಡಲು ನಡೆದಿರುವ ಹಣಕಾಸಿನ ವಿಚಾರದ ಡೀಲ್ ಆಡಿಯೊದಲ್ಲಿದೆ. ಚಂದ್ರ ನೀಡುತ್ತಿದ್ದ ಮಾಹಿತಿಯನ್ನು ಬಳಸಿಕೊಂಡು ರಫೀಕ್ ದುಷ್ಕೃತ್ಯ ಎಸಗಲು ಬಳಸುತ್ತಿದ್ದ ಎಂದು ಹೇಳಲಾಗಿದೆ.
ಮಂಗಳೂರು ದಕ್ಷಿಣ ಠಾಣೆಯ ರೌಡಿ ನಿಗ್ರಹ ದಳ ಪೊಲೀಸರು ಅಕ್ರಮ ಆಯುಧ ಹಾಗೂ ಮಾದಕ ವಸ್ತು ಹೊಂದಿದ ಆರೋಪದಲ್ಲಿ ತಲಕಿ ರಫೀಕ್ ನನ್ನು ಬಂಧಿಸಿದ್ದರು. ಯಾವ ಸಮಯದಲ್ಲಿ ಮಾತುಕತೆ ನಡೆಸಿದ ಆಡಿಯೊ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಇಲಾಖಾ ತನಿಖೆಗೆ ಆದೇಶ
ಸಿಸಿಬಿ ಪೊಲೀಸ್ ಒಬ್ಬರು ಆರೋಪಿ ತಲಕಿ ರಫೀಕ್ ಜತೆ ನಡೆಸಿದ ಆಡಿಯೊದ ವಿಚಾರ ಗಮನಕ್ಕೆ ಬಂದಿದೆ. ಪೊಲೀಸ್ ಸಿಬ್ಬಂದಿ ಆತನಲ್ಲಿ ಯಾವ ವಿಚಾರದಲ್ಲಿ ? ಯಾವ ಕಾರಣಕ್ಕೆ ? ಯಾವಾಗ ? ಮಾತುಕತೆ ನಡೆಸಿದ್ದಾರೆ. ಆ ಮಾತುಕತೆಯ ಆಡಿಯೊ ಈಗ ಹೇಗೆ ಬಹಿರಂಗಗೊಂಡಿತು ? ಎನ್ನುವ ವಿಚಾರದಲ್ಲಿ ತನಿಖೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಸಿಬ್ಬಂದಿ ತಪ್ಪು ಎಸಗಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.







