ಉಡುಪಿ: ದಾಸ್ತಾನು ಮರಳಿನ ವಿಲೇವಾರಿಗೆ ಕ್ರಮ
ಉಡುಪಿ, ಡಿ.4: ಕುಂದಾಪುರ ತಾಲೂಕಿನ ಗಂಗೊಳ್ಳಿ ಬ್ರೇಕ್‌ವಾಟರ್ ಕಾಮಗಾರಿಯಿಂದಾಗಿ ಕೋಡಿ ಭಾಗದಲ್ಲಿ ದಾಸ್ತಾನು ಮಾಡಿರುವ 40,000 ಮೆಟ್ರಿಕ್ ಟನ್ ಮರಳನ್ನು ವಿಲೇವಾರಿ ಮಾಡುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ದಾಸ್ತಾನಿನ ಮರಳನ್ನು ಸರಕಾರಿ ಕಾಮಗಾರಿಗೆ ಹಾಗೂ ಕಡಿಮೆ ವರಮಾನದ ವಸತಿ ಯೋಜನೆಗಳಾದ ಆಶ್ರಯ ಇನ್ನಿತರ ಯೋಜನೆಗಳಿಗೆ ಮೀಸಲಿರಿಸಲಾಗಿದೆ.
ಆದರೆ ಪ್ರಸ್ತುತ ಸಾರ್ವಜನಿಕರಿಂದ ಮನೆ/ ಕಟ್ಟಡ ನಿರ್ಮಾಣಕ್ಕಾಗಿ ಮರಳಿನ ಬೇಡಿಕೆ ಹೆಚ್ಚಾಗಿರುವುದರಿಂದ ಸದರಿ ಮರಳನ್ನು ಖಾಸಗಿ ಸ್ವಂತ ಮನೆ / ಕಟ್ಟಡ ನಿರ್ಮಾಣಕ್ಕಾಗಿ ನೀಡುವ ಬಗ್ಗೆ ಡಿ.12ರಂದು ಜರುಗಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಬೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಖಾಸಗಿ ಸ್ವಂತ ಮನೆ/ ಕಟ್ಟಡ ನಿರ್ಮಾಣಕ್ಕಾಗಿ ಮರಳನ್ನು ಪಡೆಯುವವರು ಆಯಾ ಗ್ರಾಪಂ ಅಥವಾ ನಗರಸಭೆ/ ಪುರಸಭೆ ಅಧಿಕಾರಿಯಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಮರಳಿನ ಬಗ್ಗೆ ನಿರ್ಮಾಣದ ನೀಲಿ ನಕಾಶೆಯೊಂದಿಗೆ ಆಧಾರ್ ಕಾರ್ಡ್ ಸಮೇತ ಸೂಕ್ತ ದಾಖಲೆಗಳನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕುಂದಾಪುರ ಇವರಿಗೆ ನೀಡಿ ನಿಯಮಾನುಸಾರ ಸರಕಾರಕ್ಕೆ ಪಾವತಿಸಬೇಕಾದ ಶುಲ್ಕಗಳನ್ನು ಪಾವತಿಸಿ ಸಾಗಾಣಿಕೆ ಪರವಾನಗಿಯೊಂದಿಗೆ ಮರಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.