ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಪೊಲೀಸ್ ವಶಕ್ಕೆ
ಕೊಡಂಗಲ್ (ತೆಲಂಗಾಣ), ಡಿ. 4: ತೆಲಂಗಾಣದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಚಾರದ ನಡುವೆ ಕೊಂಡಂಗಲ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತೆಲಂಗಾಣದ ಕಾರ್ಯಕಾರಿ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಮಂಗಳವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೊಡಂಗಲ್‌ನಲ್ಲಿ ನಡೆಯಲಿದ್ದ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ವರಿಷ್ಠ ಕೆ. ಚಂದ್ರಶೇಖರ ರಾವ್ ಅವರ ಸಭೆಯ ಕೆಲವು ಗಂಟೆಗಳ ಮುನ್ನ ರೇವಂತ್ ರೆಡ್ಡಿ ಅವರನ್ನು ಕೊಡಂಗಲ್‌ನಲ್ಲಿರುವ ಅವರ ನಿವಾಸದಿಂದ ತೆಲಂಗಾಣ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರೆಡ್ಡಿ ಅವರು ಸಾರ್ವಜನಿಕ ಸಭೆ ನಡೆಸದಂತೆ ಕೆ. ಚಂದ್ರಶೇಖರ ರಾವ್ ಅವರಿಗೆ ಬೆದರಿಕೆ ಒಡ್ಡಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತಂಡ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿ ಅವರನ್ನು ವಶಕ್ಕೆ ತೆಗೆದುಕೊಂಡಿತು. ಕೊಡಂಗಲ್ಲೂರಿನಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದ್ದ ಕೆಸಿಆರ್ ಅವರ ರ್ಯಾಲಿಯ ಮುಂದೆ ಪ್ರತಿಭಟನೆ ನಡೆಸಲು ತಂತ್ರ ರೂಪಿಸುವ ಉದ್ದೇಶದಿಂದ ನಡೆದ ಸಭೆಯಲ್ಲಿ ಅವರೊಂದಿಗೆ ಶಾಸಕರು ಕೂಡ ಇದ್ದರು. ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಶಾಸಕರು, ಐಡಿ ಕಾರ್ಡ್ ಹಾಗೂ ಬಂಧನಾದೇಶ ತೋರಿಸುವಂತೆ ಆಗ್ರಹಿಸಿದರು.