ಚಿತ್ರಕಲಾವಿದ ದೇವರಾಜುಗೆ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಮಂಡ್ಯ, ಡಿ.4: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಚಿತ್ರಕಲಾವಿದ ದೇವರಾಜು ಮಾರ್ಕಾಲು ಅವರಿಗೆ 2018ನೇ ಸಾಲಿನ 34ನೇ ವರ್ಷದ ಡಾ.ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಸ್ತಿಗೆ ಆಯ್ಕೆ ಮಾಡಿದ್ದು, ಡಿ.9 ಮತ್ತು 10ರಂದು ದೆಹಲಿಯ ಪಂಚಶೀಲ ಆಶ್ರಮದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಮಳವಳ್ಳಿ ತಾಲೂಕಿನ ಮಾರ್ಕಾಲು ಗ್ರಾಮದವರಾದ ದೇವರಾಜು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಚಿತ್ರಕಲಾ ಪದವಿ ಪಡೆದಿದ್ದು, ನಂತರ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಎ.ಎಂ. ಪದವಿ ಪಡೆದಿರುತ್ತಾರೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿತ್ರಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕಲೆಯನ್ನೇ ಮೈಗೂಡಿಸಿಕೊಂಡಿರುವ ದೇವರಾಜು ಅವರ ಕಲಾಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರನ್ನಾಗಿ ಎರಡು ಅವಧಿಗೆ ನೇಮಕ ಮಾಡಿತ್ತು. ಇವರ ಕಲಾಸೇವೆಗಾಗಿ ಹಲವಾರು ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಇವರ ಕಲಾಕೃತಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಗೆ ಭಾಜನವಾಗಿವೆ.





