ಪೊಲೀಸ್ ಅಧಿಕಾರಿ ಹತ್ಯೆ ಘಟನೆ ಬಳಿಕ ಕಬಡ್ಡಿ ವೀಕ್ಷಿಸಲು ತೆರಳಿದ್ದ ಆದಿತ್ಯನಾಥ್!

ಲಕ್ನೋ, ಡಿ. 4: ಬುಲಂದ್‌ಶಹರ್‌ನಲ್ಲಿ ಗೋಹತ್ಯೆಯ ವದಂತಿ ಹರಡಿ ಗುಂಪು ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಹತ್ಯೆ ನಡೆಸಿದ ಗಂಟೆಗಳ ಬಳಿಕ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ಕಬಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೋರಖ್‌ಪುರಕ್ಕೆ ತೆರಳಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿರುವ ಆದಿತ್ಯನಾಥ್ ಅವರು ನೇರವಾಗಿ ತನ್ನ ಹುಟ್ಟೂರಿಗೆ ಹಿಂದಿರುಗಿದ್ದರು. ಇಂದು ಬೆಳಗ್ಗೆ ಆದಿತ್ಯನಾಥ್ ಪೊಲೀಸ್ ಇನ್ಸ್‌ಪೆಕ್ಟರ್ ಕುಟುಂಬಕ್ಕೆ ಪರಿಹಾರ ಧನ ಘೋಷಿಸಿದ್ದರು. ಅನಂತರ ಕಬಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೋರಖ್‌ಪುರಕ್ಕೆ ತೆರಳಿದರು.
ಪ್ರತಿಪಕ್ಷಗಳ ಟೀಕೆ ಹಾಗೂ ಬುಲಂದ್‌ಶಹರ್‌ನಲ್ಲಿ ನಡೆದ ಪೊಲೀಸ್ ಇನ್ಸ್‌ಪೆಕ್ಟರ್‌ರ ಅಂತ್ಯಕ್ರಿಯೆ ಸಂದರ್ಭ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆತೆಯ ಪರಿಶೀಲನೆ ನಡೆಸಲು ಆದಿತ್ಯನಾಥ್ ತಡ ರಾತ್ರಿ ಸಭೆ ನಡೆಸಿದ್ದರು. ಇದು ಮಖ್ಯಮಂತ್ರಿ ಅವರು ಪರಿಶೀಲನೆ ನಡೆಸಬೇಕಾದ ಘಟನೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.





