ಹನೂರು: ವಿಜೃಂಭಣೆಯಿಂದ ಜರುಗಿದ ತೆಪ್ಪೋತ್ಸವ

ಹನೂರು,ಡಿ.4: ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವವು ವಿಜೃಂಭಣೆಯಿಂದ ನಡೆಯಿತು.
ಮಾದಪ್ಪನ ಸನ್ನಿಧಿಯನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಳಿಸಲಾಗಿತ್ತು. ದೇವಸ್ಥಾನದ ಮುಂಭಾಗದ ರಸ್ತೆಗಳನ್ನು ಕೂಡ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಮಾದಪ್ಪನ ದರ್ಶನ ಪಡೆದರು.
ತೆಪ್ಪೋತ್ಸವದ ಅಂಗವಾಗಿ ರಾತ್ರಿ 9ಕ್ಕೆ ಸ್ವಾಮಿಗೆ ನೈವೇದ್ಯ ಅರ್ಪಿಸಿದ ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಮಾಡಿದ್ದ ಬಿಳಿ ಬಣ್ಣದ ಕುದುರೆ ವಾಹನದಲ್ಲಿ ಕುಳ್ಳಿರಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯಮೇಳದೊಂದಿಗೆ ಸಾಲೂರು ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ನೇತೃತ್ವದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿದ ಅರ್ಚಕ ವೃಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು.
ವಿಜೃಂಭಣೆಯ ತೆಪ್ಪೋತ್ಸವ: ವಿವಿಧ ಪುಷ್ಪ ಹಾಗೂ ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವಿಶೇಷವಾಗಿ ಅಲಂಕರಿಸಲಾಗಿದ್ದ ತೆಪ್ಪದಲ್ಲಿ ಮಾದಪ್ಪನ ವಿಗ್ರಹಮೂರ್ತಿಯನ್ನು ಕುಳ್ಳಿರಿಸಿ, ಧಾರ್ಮಿಕ ವಿಧಿವಿಧಾನದ ಮೂಲಕ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ದೇಗುಲದ ಸಮೀಪದ ಕೊಳದಲ್ಲಿ ಕುಳ್ಳಿರಿಸಿ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಆಗಮಿಸಿದ ಭಕ್ತರಿಗೆ ಪ್ರಾಧಿಕಾರದ ವತಿಯಿಂದ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.







