ಚಾಂಪಿಯನ್ ಆಸೀಸ್‌ಗೆ ಆಂಗ್ಲರು ಶರಣು
ಕೊನೆಯ ನಿಮಿಷದಲ್ಲಿ 3 ಗೋಲು ಬಾರಿಸಿದ ಕಾಂಗರೂ ಪಡೆ

ಹಾಕಿ ವಿಶ್ವಕಪ್
ಭುವನೇಶ್ವರ, ಡಿ.4: ಎರಡು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಕೊನೆಯ ಅವಧಿಯಲ್ಲಿ ದಾಖಲಿಸಿದ ಮೂರು ಗೋಲುಗಳ ನೆರವಿನಿಂದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ.
ಮಂಗಳವಾರ ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಸತತ ಎರಡನೇ ಗೆಲುವು ದಾಖಲಿಸಿತು. ಈ ಮೂಲಕ ಎರಡು ಪಂದ್ಯಗಳಲ್ಲಿ ಆರು ಅಂಕ ಸಂಪಾದಿಸಿ 16 ತಂಡಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪುವ ವಿಶ್ವಾಸ ಹೆಚ್ಚಿ ಸಿಕೊಂಡಿದೆ.
ಆಸ್ಟ್ರೇಲಿಯ ಪಂದ್ಯದ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗೋಲು ಗಳಿಸಲು ವಿಫಲವಾಯಿತು. ಮೂರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲಿತು. ಆದರೆ, ಕೊನೆಯ 15 ನಿಮಿಷಗಳ ಆಟದಲ್ಲಿ ಮೈಚಳಿ ಬಿಟ್ಟು ಆಡಿದ ಆಸ್ಟ್ರೇಲಿಯ 4 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿ 2-0 ಮುನ್ನಡೆ ಸಾಧಿಸಿತು. 47ನೇ ನಿಮಿಷದಲ್ಲಿ ಜಾಕ್ ವೆಟ್ಟನ್ ಆಸೀಸ್ ಗೋಲು ಖಾತೆ ತೆರೆದರು. ಮೂರು ನಿಮಿಷದ ಬಳಿಕ ಬ್ಲೇಕ್ ಗೋವರ್ಸ್(50ನೇ ನಿಮಿಷ) ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಪಂದ್ಯ ಕೊನೆಗೊಳ್ಳಲು 4 ನಿಮಿಷ ಬಾಕಿ ಇರುವಾಗ ಕೊರೆ ವಿಯೆರ್(56ನೇ ನಿಮಿಷ) ರಿವರ್ಸ್ ಹಿಟ್ ಮೂಲಕ ಗೋಲು ಬಾರಿಸುವುದರೊಂದಿಗೆ ಆಸ್ಟ್ರೇಲಿಯಕ್ಕೆ 3-0 ಗೆಲುವು ತಂದರು.
ಕಾಂಗರೂ ಪಡೆ ಟೂರ್ನಿಯಲ್ಲಿ ತಾನಾಡಿದ್ದ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 2-1 ಅಂತರದಿಂದ ಮಣಿಸಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿ ಚೀನಾದ ವಿರುದ್ಧ 2-2 ರಿಂದ ಡ್ರಾ ಸಾಧಿಸಿರುವ ಇಂಗ್ಲೆಂಡ್‌ಗೆ ಇಂದಿನ ಸೋಲು ಹಿನ್ನಡೆ ಉಂಟು ಮಾಡಿದೆ. ಆಸ್ಟ್ರೇಲಿಯ ಡಿ.7 ರಂದು ಚೀನಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದೆ. ಅದೇ ದಿನ ಇಂಗ್ಲೆಂಡ್ ತಂಡ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
►► ಐರ್ಲೆಂಡ್-ಚೀನಾ ಸಮಬಲ
ಐರ್ಲೆಂಡ್ ಹಾಗೂ ಚೀನಾದ ನಡುವೆ ಮಂಗಳವಾರ ಇಲ್ಲಿ ನಡೆದ ವಿಶ್ವಕಪ್ ಪಂದ್ಯ 1-1 ಅಂತರದಿಂದ ಡ್ರಾನಲ್ಲಿ ಕೊನೆಗೊಂಡಿದೆ.
ಮುಂದಿನ ಸುತ್ತಿಗೆ ತಲುಪಲು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿದ್ದ ‘ಬಿ’ ಗುಂಪಿನ ಪಂದ್ಯದಲ್ಲಿ ಸಮಾನ ಗೌರವ ಲಭಿಸಿತು. ಚೀನಾದ ಪರ ಗುವೊನ್ ಚಿನ್ 43ನೇ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿದರು. 44ನೇ ನಿಮಿಷದಲ್ಲಿ ಗೋಲು ಸಿಡಿಸಿದ ಐರ್ಲೆಂಡ್‌ನ ಅಲನ್ ಸದರ್ನ್ ತಂಡ 1-1 ರಿಂದ ಸಮಬಲ ಸಾಧಿಸಲು ನೆರವಾದರು.







