ಆಸ್ಟ್ರೇಲಿಯ ಟೆಸ್ಟ್ ತಂಡಕ್ಕೆ ಆರರ ಪೋರ ಸೇರ್ಪಡೆ
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಕನಸು

ಮೆಲ್ಬೋರ್ನ್, ಡಿ.4: ಅಡಿಲೇಡ್‌ನಲ್ಲಿ ಭಾರತ ವಿರುದ್ಧ ಮೊದಲ ಟೆಸ್ಟ್‌ಗೆ ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಆಸ್ಟ್ರೇಲಿಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಡಲು ಕ್ರಿಕೆಟ್ ಆಸ್ಟ್ರೇಲಿಯದ ಅನುಮತಿಯನ್ನು ಪಡೆದಿರುವ 6ರ ಬಾಲಕ ಅರ್ಚಿ ಶಿಲ್ಲರ್ ಮೆಲ್ಬೋರ್ನ್‌ನಲ್ಲಿ ಡಿ.26ರಿಂದ ಆರಂಭವಾಗಲಿರುವ ಭಾರತ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡಲಿದ್ದಾನೆ. ಈ ವಿಚಾರವನ್ನು ಆಸ್ಟ್ರೇಲಿಯ ಕೋಚ್ ಜಸ್ಟಿನ್ ಲ್ಯಾಂಗರ್ ಖಚಿತಪಡಿಸಿದ್ದಾರೆ.
ತನಗೆ ಲೆಗ್ ಸ್ಪಿನ್ ಬೌಲಿಂಗ್ ಮಾಡುವುದೆಂದರೆ ತುಂಬಾ ಇಷ್ಟ. ಮೂರನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಆಡುವ ಅವಕಾಶ ಪಡೆದರೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುತ್ತೇನೆ. ನಥಾನ್ ಲಿನ್ ತನ್ನ ಫೇವರಿಟ್ ಕ್ರಿಕೆಟಿಗ ಎಂದು ಕೋಚ್ ಲ್ಯಾಂಗರ್ ಅವರೊಂದಿಗಿನ ಸಂಭಾಷಣೆ ವೇಳೆ ಬಾಲಕ ಹೇಳಿದ್ದಾನೆ. ಸಂಭಾಷಣೆ ವೀಡಿಯೊವನ್ನು ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮಾಡಿದೆ.
ಅರ್ಚಿ ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದಾನೆೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಅನುಭವವನ್ನು ಏರ್ಪಡಿಸುತ್ತಿರುವ ಲಾಭರಹಿತ ಜಾಗತಿಕ ಸಂಸ್ಥೆ ‘ಮೇಕ್ ಏ ವಿಶ್’ನೊಂದಿಗೆ ಕೈಜೋಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯ ಉಪಕ್ರಮದ ಭಾಗವಾಗಿ ಬಾಲಕನನ್ನು ಆಸ್ಟ್ರೇಲಿಯ ತಂಡ ಸೇರಲು ಆಹ್ವಾನ ನೀಡಿದೆ.
ಭಾರತ-ಆಸ್ಟ್ರೇಲಿಯ ಮಧ್ಯೆ ಡಿ.6ರಿಂದ ಅಡಿಲೇಡ್‌ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಡಿ.14ರಂದು ಎರಡನೇ ಟೆಸ್ಟ್, ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ನಾಲ್ಕನೇ ಟೆಸ್ಟ್ ಜ.3 ರಿಂದ ಆರಂಭವಾಗಲಿದೆ.







