ಸಿದ್ದಗಂಗಾ ಶ್ರೀಗೆ ಮಲೆನಾಡು ಕ್ರೈಸ್ತ ಸೇವಾ ಪ್ರಶಸ್ತಿ

ಚಿಕ್ಕಮಗಳೂರು, ಡಿ.4: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಈ ಸಾಲಿನ ಮಲೆನಾಡು ಕ್ರೈಸ್ತ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಾಗಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬೆನ್ ಮೊಸಸ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೈಸ್ತ ಸಂಘವು 15 ವರ್ಷಗಳಿಂದ ಸರ್ವರ ಹಿತ ಬಯಸುತ್ತ ಹಲವು ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬಂದಿದೆ. ಸಮಾಜಮುಖಿಯಾಗಿ ದುಡಿಯುವವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಸಂಘವು ಮಾಡುತ್ತಾ ಬಂದಿದೆ. ಈ ಕಾರಣದಿಂದ ಶತಾಯುಷಿಗಳಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಕಾಯಕವೇ ಕೈಲಾಸ ಎಂಬ ತತ್ವದಡಿ ದಣಿವರಿಯದೆ ಅನ್ನ-ಅಕ್ಷರ-ಜ್ಞಾನ ಎಂಬ ತ್ರಿವಿಧ ದಾಸೋಹಿಗಳಾಗಿ ದುಡಿಯುತ್ತಿರುವುದು ಇಡಿ ದೇಶಕ್ಕೆ ಹೆಮ್ಮೆ ತಂದಿದೆ. ‘ಮಲೆನಾಡು ಕ್ರೈಸ್ತ ಸೇವಾ ಪ್ರಶಸ್ತಿ 2018-19’ನ್ನು ಅವರಿಗೆ ನ.30ರಂದು ಮಠದಲ್ಲಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಫೆಲಿಕ್ಸ್ ಸಿಕ್ವೇರ, ಕ್ರೀಸ್ಟೋಫರ್ ಜಾರ್ಜ್, ಉಪಾಧ್ಯಕ್ಷ ಸಿ.ಎಂ. ಜಾರ್ಜ್, ಸುರೇಖಾ ಸಂಪತ್‌ರಾಜ್, ಸಹಕಾರ್ಯದರ್ಶಿ ಕಿರಣ್ ಡಿಸೋಜ, ನಿರ್ದೇಶಕರಾದ ಸತ್ಯರಾಜ್, ಡೆನ್ನಿಸ್ ಫೆರ್ನಾಂಡಿಸ್, ಸ್ಟೀಫನ್ ಶಶಿಕಾಂತ್, ರೊನಾಲ್ಡ್ ಸೆರಾವೋ, ಲೀನಾ ಡೆಸಾ ಹಾಗೂ ಆಲ್ಬರ್ಟ್, ಶಾಲೋಮ್ ಇದ್ದರು ಎಂದು ತಿಳಿಸಿದ್ದಾರೆ.





