ಉಡುಪಿ: ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಸುಲಿಗೆ
ಉಡುಪಿ, ಡಿ.5: ದಿನಪತ್ರಿಕೆಯೊಂದರ ಉಡುಪಿ ಕಚೇರಿಯ ಜಾಹಿರಾತು ವಿಭಾಗದ ಡೆಪ್ಯುಟಿ ಮ್ಯಾನೇಜರ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ನಗರದ ವಿಎಸ್‌ಟಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಚೇರಿ ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋಗಿದ್ದ ಇಂದ್ರಾಳಿ ಲಕ್ಷ್ಮೀಂದ್ರ ನಗರದ ನಿವಾಸಿ ರವಿ ಶೆಟ್ಟಿಗಾರ್ (37) ಎಂಬವರು ರಾತ್ರಿ 10 ಗಂಟೆಯ ಸುಮಾರಿಗೆ ಉಡುಪಿ ಕಚೇರಿಗೆ ವಾಪಾಸು ಬಂದಿದ್ದರು. ಕಚೇರಿಯಲ್ಲಿ ಫೈಲ್ ಇಟ್ಟು ಮನೆಗೆ ತೆರಳಲು ಕಚೇರಿಯ ಆವರಣದ ಬಳಿ ಮೂತ್ರ ವಿಸರ್ಜನೆಗೆ ಹೋಗಿದ್ದರೆನ್ನಲಾಗಿದೆ.
ಈ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ರವಿ ಶೆಟ್ಟಿಗಾರ್ ಅವರ ಹಿಂದಿನಿಂದ ಬಂದು ಕಾಲಿನಿಂದ ತುಳಿದು, ಹಲ್ಲೆಗೈದು ರವಿ ಶೆಟ್ಟಿಗಾರ್ ಕುತ್ತಿಗೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story