ಸಾವಯವ ಕೃಷಿ ಪದ್ದತಿಯಿಂದ ಮಣ್ಣಿನ ಏಳಿಗೆ ಸಾಧ್ಯ: ರಾಮಕೃಷ್ಣ ಶರ್ಮಾ

ಶಿರ್ವ, ಡಿ.5: ಉಡುಪಿ ಜಿಪಂ, ಕೃಷಿ ಇಲಾಖೆ, ಕಾಪು ರೈತ ಸಂಪರ್ಕ ಕೇಂದ್ರ ಮತ್ತು ಶಿರ್ವ ರೋಟರಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ 2018-19ನೇ ಸಾಲಿನ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯನ್ನು ಮಂಗಳವಾರ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿ, ಮಣ್ಣು ನಿರ್ಜೀವ ವಸ್ತು ಅಲ್ಲ. ಅದು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಮನುಷ್ಯ ಕಾಲಿಡದ ಜಾಗದ ಮಣ್ಣು ಆರೋಗ್ಯಪೂರ್ಣವಾಗಿರುತ್ತದೆ. ಕಳೆಗಳು ಮಣ್ಣಿನ ಆರೋಗ್ಯವನ್ನು ಸರಿಪಡಿಸು ತ್ತವೆ. ಸೂಕ್ಷ್ಮಜೀವಿಗಳು ಜಾಸ್ತಿಯಾದಂತೆ ಮಣ್ಣಿನ ಆರೋಗ್ಯ ಉತ್ತಮವಾಗು ತ್ತದೆ ಎಂದು ತಿಳಿಸಿದರು.
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ನಮ್ಮ ಹಾಗೂ ಮಣ್ಣಿನ ಆರೋಗ್ಯಕ್ಕೆ ಮಾರಕ. ಸಾವಯವ ಕೃಷಿ ಪದ್ದತಿಯಿಂದ ಮಾತ್ರ ಏಳಿಗೆ ಪಡೆ ಯಲು ಸಾಧ್ಯ. ದನಗಳಿಲ್ಲದೆ ಕೃಷಿ ಇಲ್ಲ. ಒಂದು ದನ, ಒಂದು ಕರು ಇದ್ದರೆ ಒಂದು ಎಕ್ರೆ ಜಾಗದಲ್ಲಿ ಸಮೃದ್ಧ ಕೃಷಿ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉಡುಪಿ ತಾಪಂ ಸದಸ್ಯೆ ಗೀತಾ ವಾಗ್ಲೆ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಪೈ ಉಪಯುಕ್ತ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಶೇಖರ್ ಮಣ್ಣಿನ ಆರೋಗ್ಯ ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಿಗೆ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು. ಶಿರ್ವ ರೋಟರಿ ಅಧ್ಯಕ್ಷ ದೆಂದೂರು ದಯಾನಂದ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ದೇವದಾಸ ನಾಯಕ್ ಮಾತನಾಡಿದರು. ಅಧ್ಯಕ್ಷತೆಯನ್ನು ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜಾ ಪೂಜಾರ್ತಿ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







