"ಕಾರ್ಮಿಕರ ಕೊರತೆಯಿಂದ ಎನ್ ಆರ್ ಜಿ ಕಾಮಗಾರಿ ಅಪೂರ್ಣ"
ಬಂಟ್ವಾಳ ತಾಪಂನ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಅಸಹಾಯಕತೆ

ಬಂಟ್ವಾಳ, ಡಿ. 5: ಕಾರ್ಮಿಕರ ಕೊರತೆಯಿಂದ ಎನ್ ಆರ್ ಜಿ ಯಡಿಯಲ್ಲಿ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್‍ನ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪಂಚಾಯತ್‍ರಾಜ್ ಇಂಜಿನಿಯರಿಂಗ್, ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೇಂದ್ರಬಾಬು ವಿಷಯ ಪ್ರಸ್ತಾವಿಸಿ, ಕಾರ್ಮಿಕರ ಕೊರತೆಯಿಂದ ಎನ್‍ಆರ್‍ಜಿಯಡಿ ಕಾಮಗಾರಿ ನಡೆಸಲಾಗದೆ ಅನುದಾನ ಲ್ಯಾಪ್ಸ್ ಆಗುವ ಸಾಧ್ಯತೆ ಇದೆ ಎಂದು ಸಭೆಯ ಗಮನಸೆಳೆದರು. ವಲಯ ಅರಣ್ಯಾಧಿಕಾರಿ ಸುರೇಶ್ ಅವರು ಇದಕ್ಕೆ ಧ್ವನಿಗೂಡಿಸಿದರು.
ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಸಾವಿರ ಕುಟುಂಬಗಳ ಪೈಕಿ 800 ಮಂದಿ ಎನ್‍ಆರ್‍ಜಿಯಲ್ಲಿ ನೋಂದಣಿ ಮಾಡುತ್ತಾರೆ. ಇದರಲ್ಲೂ 100 ರಿಂದ 200 ಮಂದಿಯಷ್ಟು ಮಾತ್ರ ಕೆಲಸ ಮಾಡುವವರು ಹಾಗಾಗಿ ಸಮಸ್ಯೆಯಾಗುತ್ತಿದೆ ಎಂದು ಇಂಜಿನಿಯರ್ ನರೇಂದ್ರ ಬಾಬು ಸಭೆಯ ಗಮನಸೆಳೆದು, ಈ ಅನುದಾನ ಸದ್ಬಳಕೆಯಾಗುವ ನಿಟ್ಟಿನಲ್ಲಿ ಬದಲಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಎನ್. ರಾಜಣ್ಣ, ಈ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವ ಭರವಸೆ ನೀಡಿದರಲ್ಲದೆ, ಪ್ರದಾನಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇಂಜಿನಿಯರ್ ನರೇಂದ್ರಬಾಬು ಅವರಿಗೆ ಸೂಚಿಸಿದರು.
ನರ್ಸರಿ ಬೆಳೆಸಿ
ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ ತಾಲೂಕಿನ ಯಾವುದಾದರೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐದು ವರ್ಷದ ಕಾರ್ಯಯೋಜನೆಯನ್ನು ರೂಪಿಸಿ ನರ್ಸರಿ ಬೆಳೆಸುವಂತೆ ಇದೇ ವೇಳೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಯವರು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ವಾಹನದ ವ್ಯವಸ್ಥೆ, ಸ್ವಂತ ಕಚೇರಿ ಇಲ್ಲ. ಸಿಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ನರ್ಸರಿ ಬೆಳೆಸಲು ಕಷ್ಟ ಸಾಧ್ಯವಾಗಬಹುದು ಎಂದರು.
ನರ್ಸರಿ ಬೆಳೆಸಲು ಜಾಗ ಗುರುತಿಸಿ, ಜನರ ಬೇಡಿಕೆಯ ಸಸಿಗಳನ್ನು ಬೆಳಸಬೇಕು. ಅದಕ್ಕೆ ಎನ್‍ಆರ್‍ಜಿಯಲ್ಲಿ ಶೆಡ್ ನಿರ್ಮಾಣ, ಕೊಳವೆ ಬಾವಿ, ನಿರ್ವಹಣೆಗೆ ಮೂವರು ಕಾರ್ಮಿಕರನ್ನು ನಿಯೋಜಿಸಲು ಅವಕಾಶವಿದೆ. ಇದರಿಂದ ಅನುದಾನವು ಬಳಕೆಯಾದಂತಾಗುತ್ತದೆ. ಜನರಿಗೆ ಪ್ರಯೋಜನವಾಗಲಿದೆ ಎಂದರು.
ಮುಂದಿನ ಸಾಲಿನಲ್ಲಿ 24 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಬಂಟ್ವಾಳದ ಈಗಿರುವ ಹಳೇ ವಲಯ ಅರಣ್ಯ ಕಚೇರಿಯನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ವಾರ ಈಗಿರುವ ಕಚೇರಿ ಸ್ಥಳಾಂತರಗೊಳ್ಳಲಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ಮಾಹಿತಿ ನೀಡಿದರು.
2,232 ಅರ್ಜಿ ಬಾಕಿ
ತಾಲೂಕಿನಲ್ಲಿ ಹೊಸ ಪಡಿತರ ಚೀಟಿಗಾಗಿ ಒಟ್ಟು 10,392 ಅರ್ಜಿಗಳು ಬಂದಿದ್ದು, ಇದರಲ್ಲಿ 8160 ಅರ್ಜಿಯನ್ನು ವಿಲೇ ಮಾಡಿ ಪಡಿತರ ಚೀಟಿ ನೀಡಲಾಗಿದೆ. ಬಾಕಿ 2,232 ಅರ್ಜಿಗಳು ವಿವಿಧ ಹಂತದ ತನಿಖೆಯಲ್ಲಿದೆ. ಇವುಗಳನ್ನು ಶೀಘ್ರ ವಿಲೇ ಮಾಡಲಾಗುವುದು ಎಂದು ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರ ಪ್ರಶ್ನೆಗೆ ಆಹಾರ ಪೂರೈಕೆ ಇಲಾಧಿಕಾರಿಯವರು ಮಾಹಿತಿ ನೀಡಿದರು.
ಸೌಭಾಗ್ಯ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಿ
ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ಮನೆಗಳಿಗೆ ಇನ್ನು ಕೂಡ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಬಗ್ಗೆ ರಾಜಣ್ಣ ಅವರು, ಮೆಸ್ಕಾಂ ಇಂಜಿನಿಯರ್ ಅವರ ಗಮನಕ್ಕೆ ತಂದರು. ಈ ಕುರಿತು ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕರು, ಸಂಸದರ ಸಮ್ಮುಖದಲ್ಲಿ ಕೆಲವರು ಪ್ರಸ್ತಾವಿಸಿದ್ದು, ತಕ್ಷಣ ಇದನ್ನು ಪರಿಶೀಲಿಸಿ ಸೌಭಾಗ್ಯ ಯೋಜನೆಯಡಿ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿದ್ದರು. ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖಾವಾರು ಮಾಹಿತಿ ನೀಡಿದರು.