ಬೆಂಗಳೂರು: ಐಐಎಸ್ಸಿಯಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟ; ಸಂಶೋಧಕ ಸಾವು
ಮೂವರಿಗೆ ಗಂಭೀರ ಗಾಯ

ಮನೋಜ್ ಕುಮಾರ್
ಬೆಂಗಳೂರು, ಡಿ.5: ಲ್ಯಾಬೋರೇಟರಿ ಪರೀಕ್ಷೆ ನಡೆಸುವ ವೇಳೆ ಆಕಸ್ಮಿಕವಾಗಿ ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಂಶೋಧನಾ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಆವರಣದಲ್ಲಿರುವ ಪ್ರಯೋಗಾಲಯವೊಂದರಲ್ಲಿ ಈ ಘಟನೆ ನಡೆದಿದ್ದು, ಮೈಸೂರು ಮೂಲದ ಸಂಶೋಧನಾ ವಿದ್ಯಾರ್ಥಿ ಮನೋಜ್ ಕುಮಾರ್(30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರ್ತಿಕ್, ನರೇಶ್ ಕುಮಾರ್ ಮತ್ತು ಅತುಲ್ಯ ಉದಯ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತುಲ್ಯ ಅವರ ಮುಖಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಗಾಯವಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನರೇಶ್ ಕುಮಾರ್ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅವರು ತೀವ್ರ ಉಸಿರಾಟದ ತೊಂದರೆಯಲ್ಲಿದ್ದಾರೆ ಎನ್ನಲಾಗಿದೆ. ಏರೋಸ್ಪೇಸ್ ವಿಭಾಗದ ಹೈಪರ್ಸಾನಿಕ್ ಮತ್ತು ಶಾಕ್ವೇವ್ ಪ್ರಯೋಗಾಲಯದಲ್ಲಿ ಬುಧವಾರ ಮಧ್ಯಾಹ್ನ 2:25 ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಐಐಎಸ್ಸಿಯ ಸೂಪರ್ವೇವ್ ಟೆಕ್ನಾಲಜೀಸ್ ಸ್ಟಾರ್ಟ್ಅಪ್ನ ನಾಲ್ವರು ಪ್ರಯೋಗಾಲಯದಲ್ಲಿದ್ದರು ಎನ್ನಲಾಗಿದೆ.
ಸ್ಥಳ ಪರಿಶೀಲನೆ ನಡೆಸಿರುವ ಐಐಎಸ್ಸಿ ತಜ್ಞರಿಗೆ ಸ್ಫೋಟದ ಕಾರಣ ಸ್ಪಷ್ಟವಾಗಿಲ್ಲ. ಪ್ರಯೋಗಾಲಯದಲ್ಲಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಅನಿಲ ಸೋರಿಕೆ ಸುಳಿವು ಕಾಣುತ್ತಿಲ್ಲ ಎನ್ನಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ದೇವರಾಜ್ ಸೇರಿದಂತೆ ಪ್ರಮುಖರು ಭೇಟಿ ನೀಡಿದರು.







