ಹೋಂ ಸ್ಟೇ ದಾಳಿ: ಪತ್ರಕರ್ತ ನವೀನ್ ಸೂರಿಂಜೆ ಮೇಲಿನ ಪ್ರಕರಣ ವಜಾ

ಮಂಗಳೂರು, ಡಿ.5: ರಾಜ್ಯದಲ್ಲಿ ಭಾರೀ ಚರ್ಚೆಗೀಡು ಮಾಡಿದ್ದ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಸುದ್ದಿ ಸಂಗ್ರಹಿಸಲು ಹೋಗಿದ್ದ ಪತ್ರಕರ್ತರನ್ನೇ ಆರೋಪಿಗಳನ್ನಾಗಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಕರ್ತ ನವೀನ್ ಸೂರಿಂಜೆ ಮೇಲಿನ ಪ್ರಕರಣವನ್ನು ನಗರದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಲಾಗಿದೆ.
2012 ಜು.28ರಂದು ಪಡೀಲ್ ಬಡ್ಲಗುಡ್ಡೆ ಯಲ್ಲಿ ಹೋಂ ಸ್ಟೇ ಪಾರ್ಟಿಯಲ್ಲಿ ತೊಡಗಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ದಾಳಿ ಮಾಡಿದ ಸಂದರ್ಭ ಪತ್ರಕರ್ತ ನವೀನ್ ಸೂರಂಜೆ ಮತ್ತು ಕ್ಯಾಮರಾಮ್ಯಾನ್ ಶರಣ್‌ರಾಜ್ ಸ್ಥಳಕ್ಕೆ ಸುದ್ದಿ ಸಂಗ್ರಹಕ್ಕಾಗಿ ತೆರಳಿದ್ದರು. ಆದರೆ ಘಟನೆ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಕಾಲದಲ್ಲಿ ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಅವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ನವೀನ್ ಸೂರಂಜೆ ನಾಲ್ಕೂವರೆ ತಿಂಗಳ ಜೈಲುವಾಸ ಅನುಭವಿಸಿದ್ದರು.
ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ನವೀನ್ ಪತ್ರಕರ್ತನಾಗಿ ಮಾಹಿತಿ ಸಂಗ್ರಹಿಸಲು ಹೋಗಿದ್ದು, ಅವರು ಸಂಗ್ರಹಿಸಿದ ಮಾಹಿತಿಯನ್ನು ಸಾಕ್ಷವಾಗಿ ಪರಿಗಣಿಸಬೇಕೇ ಹೊರತು, ಆತನನ್ನೇ ಆರೋಪಿ ಎಂದು ಪರಿಣಿಗಸುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.
ಪತ್ರಕರ್ತ ನವೀನ್ ಸೂರಿಂಜೆ ಮೇಲಿನ ಪ್ರಕರಣವನ್ನು ಕೈಬಿಡಲು ಸರಕಾರವು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ತಿರಸ್ಕರಿಸುವ ಅಧಿಕಾರವೂ ಇತ್ತು. ಪ್ರಕರಣದ ಉಳಿದ ಆರೋಪಿಗಳು ಪತ್ರಕರ್ತ ನವೀನ್ ಸೂರಿಂಜೆ ಮೇಲಿನ ಪ್ರಕರಣವನ್ನು ಕೈಬಿಡಬಾರದು ಎಂದು ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಹಾಗಾಗಿ ಪತ್ರಕರ್ತ ನವೀನ್ ಸೂರಿಂಜೆ ಮೇಲಿನ ಪ್ರಕರಣವನ್ನು ವಜಾಗೊಳಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಕೊನೆಗೆ ಸರಕಾರದ ಮನವಿಯಂತೆ ಸೂರಿಂಜೆ ಅವರ ಮೇಲಿನ ಆರೋಪ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಉಳಿದ ಆರೋಪಿಗಳ ಮೇಲಿನ ವಿಚಾರಣೆ ಮುಂದುವರಿಯಲಿದೆ.
ನ್ಯಾಯವಾದಿ ದಿನೇಶ್ ಹೆಗಡೆ ಉಳಿಪ್ಪಾಡಿ ವಾದ ಮಂಡಿಸಿದ್ದರು.







