ಅತೀಭಾರದ ಉಪಗ್ರಹ ಜಿಎಸ್‌ಎಟಿ-11 ಉಡಾವಣೆ

ಬೆಂಗಳೂರು, ಡಿ.5: ದೇಶದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಹೆಚ್ಚಿಸಲು ನೆರವಾಗಲಿರುವ ಇಸ್ರೋದ ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಎಸ್‌ಎಟಿ-11 ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಫ್ರಾನ್ಸ್‌ನ ಕೌರೋ ಉಡ್ಡಯನ ಕೇಂದ್ರದಿಂದ ಬುಧವಾರ ಮುಂಜಾನೆ ಭಾರತೀಯ ಕಾಲಮಾನ 2:07 ಗಂಟೆಗೆ ಏರಿಯಾನ್ 5 ವಿಎ-246 ಉಡ್ಡಯನ ವಾಹಕದ ಮೂಲಕ ಜಿಎಸ್‌ಎಟಿ-11 ಉಪಗ್ರಹದ ಜೊತೆಗೆ ದಕ್ಷಿಣ ಕೊರಿಯಾದ ಜಿಇಒ-ಕೊಂಪ್ಸಾಟ್ -2ಎ ಉಪಗ್ರಹವನ್ನೂ ಅಂತರಿಕ್ಷಕ್ಕೆ ಉಡಾಯಿಸಲಾಗಿದೆ. 30 ನಿಮಿಷ ಬಳಿಕ ಏರಿಯಾನ್ 5ರಿಂದ ಪ್ರತ್ಯೇಕಗೊಂಡ ಜಿಎಸ್‌ಎಟಿ-11, ಉದ್ದೇಶಿತ ಕಕ್ಷೆಗೆ ಅತಿ ಸನಿಹದಲ್ಲಿ ನೆಲೆಯಾಗಿದೆ. 584 ಕಿ.ಗ್ರಾಂ ತೂಕವಿರುವ ಈ ಉಪಗ್ರಹವು ಕೆಯು-ಬ್ಯಾಂಡ್‌ನಲ್ಲಿ 32 ಯೂಸರ್‌ಬೀಮ್‌ಗಳ ಮೂಲಕ ಹಾಗೂ ಕೆಎ-ಬ್ಯಾಂಡ್‌ನಲ್ಲಿ 8 ಹಬ್ ಬೀಮ್‌ಗಳ ಮೂಲಕ ಭಾರತದ ಅಂತರ್‌ಜಾಲ ಬಳಕೆದಾರರಿಗೆ ಹೆಚ್ಚಿನ ಡೇಟಾ ದರ ಸಂಪರ್ಕ ವ್ಯವಸ್ಥೆ ಒದಗಿಸಲಿದೆ.
ದೇಶದಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿರುವ ಭಾರತ್‌ನೆಟ್ ಯೋಜನೆಯಡಿ ಬರುವ ದುರ್ಗಮ ಗ್ರಾಮಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ವರ್ಧಿಸಲು ಈ ಉಪಗ್ರಹ ನೆರವಾಗಲಿದೆ. ಭವಿಷ್ಯದ ಅತ್ಯಾಧುನಿಕ ಸಂವಹನ ಉಪಗ್ರಹಗಳಲ್ಲಿ ಮುಂಚೂಣಿ ಸಾಲಿನಲ್ಲಿ ಕಾಣಿಸಿಕೊಳ್ಳುವ ಈ ಯಶಸ್ವೀ ಉಡ್ಡಯನದಿಂದ ಇಸ್ರೋದ ಆತ್ಮವಿಶ್ವಾಸ ವೃದ್ಧಿಸಿದೆ ಎಂದು ಇಸ್ರೋ ಅಧ್ಯಕ್ಷ ಡಾ ಕೆ.ಶಿವನ್ ಹೇಳಿದ್ದಾರೆ.
ಉಡ್ಡಯನ ವಾಹಕದಿಂದ ಬೇರ್ಪಟ್ಟ ಬಳಿಕ ಜಿಎಸ್‌ಎಟಿ-11 ಉಪಗ್ರಹದ ನಿಯಂತ್ರಣವನ್ನು ಹಾಸನದಲ್ಲಿರುವ ಇಸ್ರೋ ಕೇಂದ್ರ ನಿರ್ವಹಿಸುತ್ತದೆ. 74 ಡಿಗ್ರಿ ಪೂರ್ವ ರೇಖಾಂಶದಲ್ಲಿ ಭೂಸ್ಥಾಯೀ ಕಕ್ಷೆಯಲ್ಲಿ ನೆಲೆನಿಲ್ಲುವ ಈ ಉಪಗ್ರಹ ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ.







