"ಸ್ನೇಹಿತರ ಪ್ರಾಣ ರಕ್ಷಿಸಲು ನಮ್ಮ ಮಗ ಅವನ ಪ್ರಾಣವನ್ನೇ ಬಲಿಕೊಟ್ಟ"
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕೃತ ಬಾಲಕ ಹೇಮಂತ್ ಪೋಷಕರ ಮಾತು

ಬೆಂಗಳೂರು, ಡಿ.5: ಎಂಟನೇ ತರಗತಿ ಓದುತ್ತಿದ್ದ 14 ವರ್ಷದ ನಮ್ಮ ಮಗ ಗಾಂಧಿ ಜಯಂತಿ ದಿನದಂದು ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಹೊಳೆಯಲ್ಲಿ ಮುಳುಗಿ ಹೋಗುತ್ತಿದ್ದ ಸ್ನೇಹಿತರನ್ನು ರಕ್ಷಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ. ಆದರೆ, ಅವನಿಂದ ರಕ್ಷಣೆಗೊಳಗಾದವರ ಮನೆಯವರು ಅವರ ಸಾವಿಗೆ ಸಣ್ಣ ಸಂತಾಪವನ್ನೂ ಸೂಚಿಸಲಿಲ್ಲ..!
ಇದು ಇಂದು ನಗರದ ಬಾಲಭವನದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಹಾಗೂ ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಇಬ್ಬರು ಮಕ್ಕಳನ್ನು ರಕ್ಷಿಸಿ ನೀರಿನ ಸೆಳೆತಕ್ಕೆ ಸಿಕ್ಕಿ ಮರಣ ಹೊಂದಿದ ಎಸ್.ಎಂ.ಹೇಮಂತ್ ಪೋಷಕರ ಮಾತುಗಳು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನಮ್ಮ ಮಗ ಕ್ರೀಡೆಯಲ್ಲಿ ಅತ್ಯುತ್ತಮ ಆಟಗಾರನಾಗಿದ್ದ. ಅಲ್ಲದೆ, ಓದಿನಲ್ಲಿಯೂ ಮುಂದೆ ಇರುತ್ತಿದ್ದ. ಆದರೆ, ಬೇರೆಯವರ ಮಕ್ಕಳ ರಕ್ಷಣೆ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ. ಈ ಘಟನೆ ನಡೆದ ನಂತರ ರಕ್ಷಣೆಗೊಳಗಾದವರ ಪೋಷಕರು ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಘಟನೆ ಎಂದು ನಮೂದಿಸಲು ಪಿತೂರಿ ನಡೆಸಿದ್ದಾರೆ. ನಮಗೆ ಶಿಕ್ಷಣ ಇಲಾಖೆಯಿಂದ ಒಂದಿಷ್ಟು ಪರಿಹಾರ ಸಿಕ್ಕಿದ್ದು ಬಿಟ್ಟರೆ ಬೇರೆ ಯಾವುದೇ ಪರಿಹಾರವೂ ಸಿಕ್ಕಿಲ್ಲ ಎಂದು ಮಗನನ್ನು ಕಳೆದುಕೊಂಡ ತಂದೆ-ತಾಯಿ ಚೆನ್ನಮ್ಮ ಹಾಗೂ ಶ್ರೀನಿವಾಸ ಆಚಾರ್ ನೋವನ್ನು ಹೇಳಿಕೊಂಡರು.
ಬೆಳ್ತಂಗಡಿಯ ಸುಜಯ್ ಎಂಬ 10 ವರ್ಷದ ಬಾಲಕ, ತಾನು ಮತ್ತು ಸ್ನೇಹಿತ ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ಅಡಿಕೆ ಮರದಿಂದ ಮಾಡಿರುವ ಸೇತುವೆ ದಾಟುವ ವೇಳೆ ಕಾಲು ಜಾರಿ ನೀರಿಗೆ ಬೀಳುತ್ತಿದ್ದ ಆದಿತ್ಯ ಮೆಹಂದೆಳೆ ಎಂಬುವವನನ್ನು ರಕ್ಷಿಸುವ ಮೂಲಕ ಸಾಹಸ ಪ್ರದರ್ಶಿಸಿದ್ದನ್ನು ಶಾಲೆಯ ಮುಖ್ಯೋಪಾಧ್ಯಾಯ ಮಾದವರಾವ್ ನೆನಪಿಸಿಕೊಂಡರು. ತಾಯಿಯಿಲ್ಲದ ಮಗುವನ್ನು ಅವರ ದೊಡ್ಡಮ್ಮ ಸಾಕುತ್ತಿದ್ದಾರೆ. ಬಡ ಕುಟುಂಬದಲ್ಲಿರುವ ಸುಜಯ್ ಓದಿನಲ್ಲಿ ಮುಂದಿದ್ದಾನೆ ಎಂದರು.
10 ವರ್ಷದ ಸಾಹಸಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಹತ್ತು ವರ್ಷದ ಶಿವಾನಂದ ಹೊಸಟ್ಟಿ ಹಾಗೂ ಸಿದ್ದಪ್ಪಾ ಕೆಂಪಣ್ಣಾ ಹೊಸಟ್ಟಿ ಎಂಬ ಬಾಲಕರು, ಜೂನ್ ನಲ್ಲಿ ಊರಿನ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದ ಸಂದರ್ಭ ಅದರಲ್ಲಿ ಆಕಸ್ಮಿಕವಾಗಿ ಬಾಲಕರು ಬಿದ್ದದ್ದು, ಅವರ ಆಕ್ರಂದನ, ಚೀರಾಟ ಕೇಳಿ ಸ್ಥಳ್ಕಕೆ ಧಾವಿಸಿ ನೀರಿನ ರಭಸಕ್ಕೂ ಭಯಪಡದೆ, ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರು.
ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲು ಗೋಣದಲ್ಲಿ ಒಂಬತ್ತು ವರ್ಷದ ಆರ್ತಿ ಕಿರಣ್, ತನ್ನ 2 ವರ್ಷದ ಸಹೋದರ ಆಟವಾಡುತ್ತಿದ್ದಾಗ ಏಕಾಏಕಿ ಹೋರಿಯೊಂದು ದಾಳಿ ನಡೆಸಿತು. ಈ ಸಂದರ್ಭದಲ್ಲಿ ಆರ್ತಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು, ರಕ್ಷಣೆ ಮಾಡಿದ್ದರು.
ಮೈಸೂರಿನ ದೇವನ್ಯ ರಸ್ತೆಯ 13 ವರ್ಷದ ಎಸ್.ಎನ್.ಮೌರ್ಯ, ಜುಲೈನಲ್ಲಿ ಸ್ನೇಹಿತನೊಂದಿಗೆ ಹಾರಂಗಿ ಜಲಾಶಯ ನೋಡಲು ಹೋಗಿದ್ದು, ತಿಂಡಿ ತಿಂದು ತಟ್ಟೆ ತೊಳೆಯಲು ನದಿಯ ಹತ್ತಿರ ಹೋದಾಗ 60 ವಯಸ್ಸಿನ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದನ್ನು ಕಂಡು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರು.
"ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೇ ಓದುವ ಕಡೆಗೆ ಹೆಚ್ಚು ಗಮನ ನೀಡಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಟಿವಿ ಮಾಧ್ಯಮಗಳಿಂದ ಹೊರಬಂದು ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸರವನ್ನು ನೋಡಬೇಕು ಹಾಗೂ ಅದನ್ನು ಉಳಿಸಲು ಮುಂದಾಗಬೇಕು" ಎಂದು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲ ಹೇಳಿದರು.
ಮಕ್ಕಳು ಎಂದರೆ ಬಂಡವಾಳ ಹೂಡುವ ವಸ್ತುವಲ್ಲ. ಅವರ ಮೇಲೆ ಒತ್ತಡ ಹೇರುವ ವಾತಾವರಣ ನಿರ್ಮೂಲನೆಯಾಗಬೇಕು. ಇಂದಿನ ಮಕ್ಕಳು ಮನಸ್ಸು ಮಾಡಿದರೆ ಇಡೀ ಸಮಾಜವನ್ನು ಬದಲಾಯಿಸಬಹುದು. ಆದರೆ, ಬಾಲ್ಯದಿಂದಲೇ ಮಕ್ಕಳ ಮಾನಸಿಕತೆಯ ಮೇಲೆ ಒತ್ತಡ ಹೇರುವುದನ್ನು ಪೋಷಕರು ಬಿಡಬೇಕು. ಆಗ ಮಕ್ಕಳು ಸಾಹಸಿಗರಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
2018ನೇ ಸಾಲಿನಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ 4 ಸಂಸ್ಥೆಗಳು ಹಾಗೂ 4 ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ನೀಡಲಾಯಿತು. ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ವೈಯಕ್ತಿಕ ಪ್ರಶಸ್ತಿಯು 25 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಲಾಯಿತು.
ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ಕಾಪಾಡಿದ 7 ಮಕ್ಕಳಿಗೆ ಹಾಗೂ ಒಬ್ಬರಿಗೆ ಮರಣೋತ್ತರ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಜೊತೆಗೆ, ತಲಾ 10 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆಯನ್ನು ನೀಡಲಾಯಿತು.







