ಜನಸಾಮಾನ್ಯರ ಏಳ್ಗೆಗಾಗಿ ಶ್ರಮಿಸಿದ ಶಿವಾಜಿ ಛತ್ರಪ್ಪ: ಮುಖ್ಯಮಂತ್ರಿ ಕುಮಾರಸ್ವಾಮಿ
ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಡಿ. 5: ಬಡವರ, ದೀನ ದಲಿತರ ಧ್ವನಿಯಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿಯನ್ನು ಶಿವಾಜಿ ಛತ್ರಪ್ಪ ಕಾಗಣಿಕಾರ ಅವರಿಗೆ ಇಂದು ಪ್ರದಾನ ಮಾಡಿರುವುದು ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದಿನ ಕಷ್ಟದ ಕಾಲದಲ್ಲೂ, ಬಿಎಸ್ಸಿ ಪದವಿ ಪಡೆದ ಶಿವಾಜಿ ಅವರು ಬೆಳಗಾವಿಯ ಹಳ್ಳಿಗಳ ಏಳಿಗೆಗೆ ಶ್ರಮಿಸಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಅಭಿವೃದ್ಧಿಗೆ, ಶಿಕ್ಷಣಕ್ಕೆ ಶ್ರಮಿಸಿದರು. ತಮ್ಮ ಊರಿನ ಮಣ್ಣಿನ ಪ್ರೀತಿ ಹೊಂದಿ ಏಳಿಗೆಗಾಗಿ ದುಡಿದರು. ಇಂತಹ ಅಪರೂಪದ, ಸರಳ ವ್ಯಕ್ತಿತ್ವದ ಶಿವಾಜಿ ಅವರಿಗೆ ಈ ಪ್ರಶಸ್ತಿ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಕುಮಾರಸ್ವಾಮಿ ತಿಳಿಸಿದರು.
ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಾಜಿ ಛತ್ರಪ್ಪ ಕಾಗಣಿಕಾರ, 1972ರಿಂದಲೇ ಬೆಳಗಾವಿಯ ಹಳ್ಳಿ-ಹಳ್ಳಿಗೆ ಗೋಬರ್‌ಗ್ಯಾಸ್ ಆಂದೋಲನ ಪ್ರಾರಂಭಿಸಿದ್ದರಿಂದ ಪ್ರತಿಯೊಂದು ಮನೆಗೆ ಇದರಿಂದ ಅನುಕೂಲವಾಯಿತು. ರಾತ್ರಿ ಶಾಲೆಗಳನ್ನು ನಡೆಸಿ ಶೈಕ್ಷಣಿಕವಾಗಿ ಜನರ ಏಳಿಗೆಗೆ ಶ್ರಮಿಸಿ, ಸ್ತ್ರೀಶಕ್ತಿ ಗುಂಪುಗಳ ಸಶಕ್ತಗೊಳಿಸಿ ತಾವು ಅಭಿವೃದ್ಧಿ ಪರ ಹೆಜ್ಜೆ ಹಾಕಿದ್ದೇನೆ ಎಂದು ಸ್ಮರಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಶಿವಾಜಿ ಛತ್ರಪ್ಪ ಅವರು ಮಹಿಳಾ ಸಶಕ್ತೀಕರಣ, ಶೈಕ್ಷಣಿಕ ಸಬಲತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅನನ್ಯ ಸಾಧನೆ ಮಾಡಿದ್ದಾರೆ. ಇಂದಿಗೂ ಇವರಿಗೆ ಸ್ವಂತ ಮನೆ, ವಾಹನವಿಲ್ಲ. ಅಲೆಮಾರಿಯಾಗಿ ಸಂಚರಿಸಿ ಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ವಿರಳ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಸು ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿಯ ಶಿವಾಜಿ ಛತ್ರಪ್ಪ ಕಾಗಣಿಕಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 5ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ವೆಂಕಟರಮಣಪ್ಪ, ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ, ಮಾಜಿ ಸಚಿವ ರೋಷನ್ ಬೇಗ್, ಹಿಂ.ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಉಪಸ್ಥಿತರಿದ್ದರು.







