ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಭದ್ರೇಗೌಡ ಅವಿರೋಧ ಆಯ್ಕೆ

ಬೆಂಗಳೂರು, ಡಿ.5: ಬಿಬಿಎಂಪಿ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಾಗಪುರ ವಾರ್ಡ್ ಸದಸ್ಯ ಬಿ.ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ.ಭದ್ರೇಗೌಡ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ್ ಅವರು ಪ್ರಕಟಿಸಿದರು.
ಪಾಲಿಕೆಯಲ್ಲಿ ಪ್ರತಿ ಪಕ್ಷವಾಗಿರುವ ಬಿಜೆಪಿ ಉಪಮೇಯರ್ ಸ್ಥಾನಕ್ಕೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದುದ್ದರಿಂದ ಭದ್ರೇಗೌಡರ ಆಯ್ಕೆಗೆ ಸುಗಮ ವಾಯಿತು. ಭದ್ರೇಗೌಡ ಅವರು 2 ಸೆಟ್‌ಗಳಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಬುಧವಾರ ಬೆಳಗ್ಗೆ 11:30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಅಧಿಕಾರಿ ಶಿವಯೋಗಿ ಕಳಸದ್ ಅವರು ಸಭೆಯಲ್ಲಿ ಹಾಜರಿದ್ದ 219 ಸದಸ್ಯರ ಎಲ್ಲ ಸದಸ್ಯರ ಸಹಿಯನ್ನು ಪಡೆದುಕೊಂಡರು. ಭದ್ರೇಗೌಡ ಅವರನ್ನು ಹೊರತುಪಡಿಸಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಭದ್ರೇಗೌಡ ಅವರು ಅರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರು ಘೋಷಿಸಿದರು.
ನೂತನ ಉಪಮೇಯರ್ ಆಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಮೇಜು ಕುಟ್ಟಿ ಸಂಭ್ರಮಿಸಿದರು. ಭದ್ರೇಗೌಡ ಅವರಿಗೆ ಕೈ ಕುಲುಕಿ ಅಭಿನಂದನೆ ಸಲ್ಲಿಸಿದರು.
ಅ.5ರಂದು ಹೃದಯಾಘಾತದಿಂದ ಜೆಡಿಎಸ್ ರಮೀಳಾ ಉಮಾಶಂಕರ್ ನಿಧನರಾಗಿದ್ದರಿಂದ ಉಪಮೇಯರ್ ಸ್ಥಾನ ತೆರವಾಗಿತ್ತು. ಅದಕ್ಕಾಗಿ ಬುಧವಾರ ಚುನಾವಣೆ ನಡೆಸಲಾಯಿತು.
ಭದ್ರೇಗೌಡ ಹಿನ್ನೆಲೆ
ಬಿ.ಭದ್ರೇಗೌಡ ಅವರು ಜೆಡಿಎಸ್ ಪಕ್ಷದಿಂದ ನಾಗಪುರ ವಾರ್ಡ್‌ನಿಂದ ಮೊದಲ ಬಾರಿಗೆ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಿ.ಕಾಂ. ಪದವಿ ಪಡೆದಿದ್ದಾರೆ. ವಾರ್ಡ್ ಮಟ್ಟದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮತ್ತು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿಗೆ ಮುಖಭಂಗ ?
ಈಗಾಗಲೇ ಕಾಂಗ್ರೆಸ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬಿಬಿಎಂಪಿ ಮೇಯರ್ ಆಗಿದ್ದು, ಎರಡೂ ಪಕ್ಷಗಳ ಮುಖಂಡರ ತೀರ್ಮಾನದಂತೆ ಭದ್ರೇಗೌಡ ಅವರು ಉಪಮೇಯರ್ ಅಭ್ಯರ್ಥಿಯಾದರು. ಬಿಜೆಪಿ ಆಪರೇಷನ್ ಕಮಲ ಮಾಡಿ ಪಕ್ಷೇತರರನ್ನು ಹಿಡಿತದಲ್ಲಿಟ್ಟುಕೊಂಡಿದ್ದರಿಂದ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಬಿಜೆಪಿ ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತೆ ಮುಖಭಂಗ ಅನುಭವಿಸಿದೆ ಎನ್ನುವ ಮಾತುಗಳು ಕೇಳಿಬಂದಿವೆ.







