ಬೆಂಗಳೂರು ವಿವಿ: ಮ್ಯಾನೇಜ್‌ಮೆಂಟ್ ಕೋರ್ಸ್ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆ ಕಡ್ಡಾಯ
ಬೆಂಗಳೂರು, ಡಿ.5: ಮುಂದಿನ ದಿನಗಳಲ್ಲಿ ಬೆಂಗಳೂರು ವಿವಿಯಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಯೊಂದು ಕಡ್ಡಾಯವಾಗಿ ಕಲಿಸಲು ನಿರ್ಧರಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ವಿದೇಶಿ ಭಾಷೆಗಳನ್ನು ಕಲಿತ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೊಗಾವಕಾಶಗಳು ಲಭ್ಯವಿವೆ. ಈ ಹಿನ್ನೆಲೆಯಲ್ಲಿ 2019-20ನೇ ಶೈಕ್ಷಣಿಕ ವರ್ಷದಿಂದ ಮ್ಯಾನೇಜ್‌ಮೆಂಟ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಯೊಂದನ್ನು ಕಡ್ಡಾಯಗೊಳಿಸಲು ವಿವಿಯ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಅಧ್ಯಯನ ಮಂಡಳಿ ಮುಂದಾಗಿದೆ.
ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಹೆಚ್ಚು ಅವಕಾಶಗಳಿವೆ. ಆದರೆ, ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಸಂವಹನ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೇಮಕಾತಿ ಹಂತದಲ್ಲಿ ಕಂಪೆನಿಗಳು ಭಾರತೀಯ ವಿದ್ಯಾರ್ಥಿಗಳನ್ನು ತಿರಸ್ಕಾರ ಮಾಡುತ್ತಿವೆ ಎಂಬ ಆರೋಪವಿದೆ. ಆದುದರಿಂದಾಗಿ ವಿದೇಶಿ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡಲು ಮುಂದಾಗಿದ್ದೇವೆ ಎಂದು ವಿವಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
2019 ರ ಶೈಕ್ಷಣಿಕ ವರ್ಷದಿಂದ ಜಾರಿ ಮಾಡುತ್ತಿರುವ ಮೂರು ವಿದೇಶಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಒಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಜರ್ಮನ್, ಫ್ರೆಂಚ್ ಹಾಗೂ ಜಪಾನಿ ಭಾಷೆಗಳನ್ನು ವಿವಿ ಪರಿಚಯ ಮಾಡಿಕೊಡುತ್ತಿದೆ. ಮೊದಲ ಹಾಗೂ ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ವಿದೇಶಿ ಭಾಷೆಯನ್ನು ಕಲಿಯುವುದು ಕಡ್ಡಾಯವಾಗಿದೆ.
1 ಮತ್ತು 3ನೇ ಸೆಮಿಸ್ಟರ್ ವಿದೇಶಿ ಭಾಷೆ ಕಲಿಯುವ ವಿದ್ಯಾರ್ಥಿಗಳಿಗೆ ’ಉದ್ಯೊಗ ಕೌಶಲಗಳು ಹಾಗೂ ವಿದೇಶಿ ಭಾಷೆ ಕಲಿಕೆ’ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಈ ನಡುವೆ, ವಿದೇಶಿ ಭಾಷೆಯನ್ನು ಬೋಧಿಸುವ ಪ್ರಾಧ್ಯಾಪಕರಿಗಾಗಿ ವಿವಿಯು ಹುಡುಕಾಟ ನಡೆಸಿದೆ ಎಂದು ಮೂಲಗಳು ಹೇಳಿವೆ.







