ದಕ್ಷಿಣ ವಲಯ ಅಂತರ ವಿವಿ ಚೆಸ್ ಚಾಂಪಿಯನ್‌ಷಿಪ್: ಉಸ್ಮಾನಿಯಾ, ಅಣ್ಣಾ ವಿವಿ ಮುನ್ನಡೆ

ಮಣಿಪಾಲ, ಡಿ.5: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಮಂಗಳವಾರ ಪ್ರಾರಂಭಗೊಂಡಿರುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಚೆಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನದ ಆಟದ ಕೊನೆಗೆ ತಲಾ ಎಂಟು ಅಂಕಗಳನ್ನು ಸಂಗ್ರಹಿಸಿರುವ ಹೈದರಾಬಾದ್‌ನ ಉಸ್ಮಾನಿಯಾ ವಿವಿ, ಚೆನ್ನೈನ ಅಣ್ಣಾ ವಿವಿ ಹಾಗೂ ಚೆನ್ನೈನ ಮದ್ರಾಸ್ ವಿವಿ ತಂಡಗಳು ಅಗ್ರಸ್ಥಾನದಲ್ಲಿ ಮುನ್ನಡೆದಿವೆ.
ಎರಡನೇ ದಿನದ ಕೊನೆಗೆ ಒಟ್ಟು ನಾಲ್ಕು ಸುತ್ತಿನ ಪಂದ್ಯಗಳು ಮುಗಿದಿದ್ದು, ಈ ಮೂರು ತಂಡಗಳು ತಲಾ ಎಂಟು ಅಂಕಗಳೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿವೆ. ಪ್ರತಿ ತಂಡಗಳು ತಲಾ ಏಳು ಪಂದ್ಯಗಳನ್ನು ಆಡಬೇಕಾಗಿದೆ.
ಇಂದು ನಡೆದ ನಾಲ್ಕನೇ ಸುತ್ತಿನ ಪಂದ್ಯಗಳ ಟಾಪ್‌ಬೋರ್ಡ್‌ನಲ್ಲಿ ಅಗ್ರಸೀಡ್ ಉಸ್ಮಾನಿಯಾ ವಿವಿ(8), ಚೆನ್ನೈನ ಎಸ್‌ಆರ್‌ಎಂ ವಿವಿ (6)ಯನ್ನು ಪರಾಭವಗೊಳಿಸಿದರೆ, ಅಣ್ಣಾ ವಿವಿ (8) ಮತ್ತೊಂದು ಪಂದ್ಯದಲ್ಲಿ ಮಂಗಳೂರು ವಿವಿ (6)ಯನ್ನು ಹಿಮ್ಮೆಟ್ಟಿಸಿತು.
ಇನ್ನೊಂದು ಪಂದ್ಯದಲ್ಲಿ ಮದ್ರಾಸ್ ವಿವಿ, ಸುರತ್ಕಲ್‌ನ ಕರ್ನಾಟಕ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (6) ತಂಡವನ್ನು ಪರಾಭವಗೊಳಿಸಿತು.