ತ್ರಿವಳಿಗೆ ಜನ್ಮ ನೀಡಿದ ತಾಯಿ: ಅರ್ಧ ತಾಸಿನಲ್ಲೇ ಮೂವರು ಮಕ್ಕಳು ಸಾವು

ಸಾಂದರ್ಭಿಕ ಚಿತ್ರ
ದಾವಣಗೆರೆ,ಡಿ.5: ತ್ರಿವಳಿಗೆ ಜನ್ಮ ನೀಡಿದ ತಾಯಿಯ ಮಡಿಲು ಅರ್ಧ ಗಂಟೆಯಲ್ಲೇ ಬರಿದಾಗಿದ್ದು, ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ಕಾವೇರಿ ಎಂಬವರೇ ಜನ್ಮ ನೀಡಿದ ಮೂರು ಮಕ್ಕಳನ್ನು ಕೇವಲ ಅರ್ಧ ಗಂಟೆಯಲ್ಲಿ ಕಳೆದುಕೊಂಡಿರುವ ಮಹಿಳೆಯಾಗಿದ್ದು, ಇವರ ಇಡೀ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದಂತಾಗಿದೆ.
ಬಳ್ಳಾರಿ ಜಿಲ್ಲೆಯ ಉಜ್ಜಯಿನಿ ಗ್ರಾಮದ ಕಾವೇರಿ ಅವರನ್ನು ಕಳೆದ ಐದು ವರ್ಷಗಳ ಹಿಂದೆ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ರಾಮಪ್ಪ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಈ ದಂಪತಿಗೆ ಐದು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಕಳೆದ ಐದು ತಿಂಗಳ ಹಿಂದೆ ಕಾವೇರಿ ಗರ್ಭ ಧರಿಸಿದ್ದರು. ಇದು ರಾಮಪ್ಪನ ಕುಟುಂಬದವರ ಸಂತಸಕ್ಕೆ ಕಾರಣವಾಗಿತ್ತು. ಆದರೆ, ಆ ಸಂತಸ ಬಹಳ ದಿನ ಉಳಿಯದಂತಾಗಿದೆ.
ಕಳೆದ ರಾತ್ರಿ ಕಾವೇರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಬಿಳಿಚೋಡು ಗ್ರಾಮದಿಂದ ಜಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಎರಡು ಹೆಣ್ಣು ಮತ್ತು ಒಂದು ಗಂಡು ಮಗು ಸೇರಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ಮೂರೂ ಮಕ್ಕಳು ಕೇವಲ ಅರ್ಧ ಗಂಟೆಯಲ್ಲಿಯೇ ಸಾವನ್ನಪಿದ್ದಾರೆ.
ಅವಧಿಗಿಂತಲೂ ಮುಂಚೆಯೇ ಕಾವೇರಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರಿಂದ ಮೂರು ಮಕ್ಕಳು 300 ರಿಂದ 350 ಗ್ರಾಂ ಮಾತ್ರ ಇದ್ದವು. ಮಕ್ಕಳ ಬೆಳವಣಿಗೆಯಾಗದೇ ಇದ್ದುದರಿಂದ ಮೂರು ಮಕ್ಕಳೂ ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ.







