ಉಡುಪಿ ಪೊಲೀಸ್ ಕ್ರೀಡಾಕೂಟ: ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ, ಡಿ.5: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್) ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ, ಪೊಲೀಸರು ಒತ್ತಡದಲ್ಲಿ, ಸಮಯದ ಮಿತಿ ಇಲ್ಲದೆ ದಿನ 24ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಹಾಗೂ ಕೌಟುಂಬಿಕ ಯಾವುದೇ ಸಮಸ್ಯೆ ಗಳಿದ್ದರೂ ಕರ್ತವ್ಯ ಎಂಬುದು ಮುಖ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಕ್ರೀಡಾಕೂಟವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದರು.
ಕರ್ತವ್ಯಕ್ಕೆ ಅತಿ ಅಗತ್ಯವಾಗಿರುವ ದೈಹಿಕ ಆರೋಗ್ಯ, ಸಂತೋಷ ನೀಡುವ ಕುಟುಂಬ ಹಾಗೂ ಬದುಕು ರೂಪಿಸುವ ಮಕ್ಕಳ ಶಿಕ್ಷಣದ ಕಡೆಗೆ ಪೊಲೀಸರು ಹೆಚ್ಚಿನ ಗಮನ ನೀಡಬೇಕು ಎಂದು ಅವರು ತಿಳಿಸಿದರು.
ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಡಿಎಆರ್‌ನ ಯೋಗೀಶ್ ನಾಯ್ಕಿ ಹಾಗೂ ಮಹಿಳಾ ವಿಭಾಗದಲ್ಲಿ ಕುಂದಾಪುರದ ಅರ್ಶಿತಾ ಪಡೆದುಕೊಂಡರು. ಹಗ್ಗಜಗ್ಗಾಟದಲ್ಲಿ ಡಿಪಿಓ ಪ್ರಥಮ, ಡಿಎಆರ್ ದ್ವಿತೀಯ, ವಾಲಿಬಾಲ್‌ನಲ್ಲಿ ಡಿಪಿಓ ಪ್ರಥಮ, ಡಿಎಆರ್ ದ್ವಿತೀಯ, ಕಬಡ್ಡಿಯಲ್ಲಿ ಡಿಎಆರ್ ಪ್ರಥಮ ಹಾಗೂ ಉಡುಪಿ ವಿಭಾಗ ದ್ವಿತೀಯ ಬಹುಮಾನ ಪಡೆ ಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ತ್ರಶಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ವಾಗತಿಸಿದರು. ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ವಂದಿಸಿದರು. ಬಿ.ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.