ವಿಜ್ಞಾನ-ತಂತ್ರಜ್ಞಾನ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು ಇಂಡಿಯಾ ನ್ಯಾನೋ-2018ರ ಉದ್ಘಾಟನೆ

ಬೆಂಗಳೂರು, ಡಿ. 5: ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆ ಮೂಲಕ ಸಂಶೋಧನೆಯ ಪ್ರಮುಖ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಣ್ಣಿಸಿದ್ದಾರೆ.
ಬುಧವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ 10ನೆ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ-2018ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
10ನೆ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಕಾರ್ಯಕ್ರಮ ಮುಂದಿನ ಪೀಳಿಗೆಯ ವಿಜ್ಞಾನಿ ಹಾಗೂ ಸಂಶೋಧಕರಿಗೆ ಪ್ರೋತ್ಸಾಹದ ಚಿಲುಮೆಯಾಗಲಿದೆ ಎಂದ ಅವರು, ಭವಿಷ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಲಿದೆ. ಈಗಾಗಲೇ ಆರ್ಥಿಕವಾಗಿ ಬೆಳೆಯುತ್ತಿದ್ದು, ವಿಶ್ವದ ಮೇಲೆ ಕರ್ನಾಟಕ ರಾಜ್ಯದ ಪ್ರಭಾವ ಬೀರುತ್ತಿದೆ ಎಂದು ನುಡಿದರು.
ಐಟಿ-ಬಿಟಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನ್ಯಾನೋ ಟೆಕ್ನಾಲಜಿ ಪ್ರತಿ ರಾಜ್ಯದ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ನ್ಯಾನೋ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದ್ದು, ನ್ಯಾನೋ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯವೂ ನಮ್ಮ ರಾಜ್ಯದಲ್ಲಿ ಸಿಗಲಿದೆ. ಮುಂದಿನ ವರ್ಷಗಳಲ್ಲಿ ನ್ಯಾನೋ ಕ್ಷೇತ್ರದಲ್ಲಿ ಕರ್ನಾಟಕ ಇತರೆ ರಾಷ್ಟ್ರಗಳನ್ನು ಹಿಂದಿಕ್ಕಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತ ರತ್ನ, ಖ್ಯಾತ ವಿಜ್ಞಾನಿ ಪ್ರೊ.ಸಿಎನ್‌ಆರ್ ರಾವ್ ಅವರು ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆ ಅಪಾರವಾದದ್ದು, ನ್ಯಾನೋ ಕ್ಷೇತ್ರಕ್ಕೂ ಇವರ ಇನ್ನಷ್ಟು ಬೆಂಬಲ ಅಗತ್ಯವಿದೆ ಎಂದ ಅವರು, ನ್ಯಾನೋ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ವಿದ್ಯಾರ್ಥಿಗಳನ್ನು ಸೆಳೆಯಲು ಇತರೆ ಕ್ಷೇತ್ರಗಳ ಸಹಕಾರ ಪಡೆಯಲು ಹಾಗೂ ತಾಂತ್ರಿಕ ಕ್ಷೇತ್ರವನ್ನು ಸದೃಢಗೊಳಿಸಲು ಸೂಕ್ತ ನಿಯಮ ತರುವ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಭಾರತ ರತ್ನ ಪ್ರೊ.ಸಿಎನ್‌ಆರ್ ರಾವ್ ಮಾತನಾಡಿ, ಈ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಇಡೀ ವಿಶ್ವದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿರುವುದು ಶ್ಲಾಘನೀಯ. ಸಂಶೋಧನೆ, ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ನಡುವೆ ಸಂಪರ್ಕ ಬೆಳೆಸಲು ಈ ಕಾರ್ಯಕ್ರಮ ಸಹಕಾರಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಸಮ್ಮೇಳನ ನಿರ್ವಹಣ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಸೂದ್, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನ ರಸಾಯನಶಾಸ್ತ್ರ ವಿಭಾಗದ ಡಾ.ಎಸ್.ಸಂಪತ್ ಸೇರಿದಂತೆ ಇನ್ನಿತರರು ಹಾಜರಿದ್ದರು.







