ವಿಕಲಚೇತನರಲ್ಲಿ ನೈತಿಕ ಸ್ಥೈರ್ಯ ತುಂಬುವ ಅಗತ್ಯವಿದೆ: ಜನ ಸದ್ಭಾವನಾ ಸಂಘಟನೆ ಮುಖ್ಯಸ್ಥ ಫೈಝ್ ಅಕ್ರಮ್ ಪಾಷ

ಬೆಂಗಳೂರು, ಡಿ.5: ವಿಕಲಚೇತನರು ಸಾಮಾನ್ಯ ಜನರಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಸಮಾಜದಲ್ಲಿರುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ಮಾಡಬೇಕಿದೆ ಎಂದು ಜನ ಸದ್ಭಾವನಾ ಸಂಘಟನೆಯ ಮುಖ್ಯಸ್ಥ ಫೈಝ್ ಅಕ್ರಮ್ ಪಾಷ ಹೇಳಿದರು.
ನಗರದ ಗೋವಿಂದಪುರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜನ ಸದ್ಭಾವನಾ ಸಂಸ್ಥೆ ಹಾಗೂ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೃಷ್ಟಿ ಮಾಂದ್ಯರಿಗೆ ಸ್ವಉದ್ಯೋಗ ರೂಪಿಸಿಕೊಳ್ಳಲು ಅಗತ್ಯವಿರುವ ಕಿಟ್ ಅನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಕಳೆದ 12 ವರ್ಷಗಳಿಂದಲೂ ನಿರಂತರವಾಗಿ ನಾವು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಇದಲ್ಲದೆ, ಕೊಳಚೆ ಪ್ರದೇಶಗಳು, ಸರಕಾರಿ ಶಾಲೆಗಳಲ್ಲಿ ಕಾನೂನು ಜಾಗೃತಿ ಅಭಿಯಾನಗಳು, ಜೈಲಿನಲ್ಲಿ ಶಿಕ್ಷೆಯನ್ನು ಪೂರ್ಣಗೊಳಿಸಿ, ದಂಡದ ಮೊತ್ತ ಪಾವತಿಸದೆ ಪರದಾಡುತ್ತಿರುವ ಬಡವರಿಗೆ ನೆರವು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ನಮ್ಮ ರಾಜ್ಯ ಹಾಗೂ ತಮಿಳುನಾಡಿನಲ್ಲಿ ಒಟ್ಟು 3 ಸಾವಿರ ಸ್ವಯಂ ಸೇವಕರು ನಮ್ಮ ಜೊತೆ ಕೆಲಸ ಮಾಡುತ್ತಿದ್ದಾರೆ. ಹಸಿವಿನ ವಿರುದ್ಧ ಹೋರಾಡಲು ‘ದೋ ರೋಟಿ’(ಎರಡು ರೊಟ್ಟಿ) ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಅಲ್ಲದೆ, ಅನಾಥ ಶವಗಳ ಅಂತ್ಯಸಂಸ್ಕಾರಕ್ಕಾಗಿ ‘ಕಫನ್ ಸೇ ದಫನ್ ತಕ್’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕಳೆದ 7 ವರ್ಷಗಳಲ್ಲಿ 1300ಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರವನ್ನು ಮಾಡಿಸಲಾಗಿದೆ ಎಂದು ಫೈಝ್ ಅಕ್ರಮ್ ಪಾಷ ತಿಳಿಸಿದರು.
ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ಶಾಹಿದ್ ಮುಖ್ತಾರ್ ಮಾತನಾಡಿ, ದೃಷ್ಟಿಮಾಂದ್ಯರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಬದಲು, ಅವರಿಗೆ ಆತ್ಮಸ್ಥೈರ್ಯ ತುಂಬುವುದರಿಂದ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವರು ಮುಂದಾಗುತ್ತಾರೆ ಎಂದರು.
ನಮ್ಮ ಎರಡು ಸಂಘಟನೆಗಳು ಒಗ್ಗಟ್ಟಾಗಿ ಇಂತಹವರನ್ನು ಗುರುತಿಸಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಈವರೆಗೆ ಸುಮಾರು 600 ಜನರನ್ನು ನಾವು ಗುರುತಿಸಿ ಅವರಿಗೆ ಅಗತ್ಯ ನೆರವು ಒದಗಿಸಿದ್ದೇವೆ. ಈ ಪೈಕಿ ಬೆಂಗಳೂರಿನಲ್ಲೆ 240 ಮಂದಿ ಇದ್ದಾರೆ ಎಂದು ಅವರು ಹೇಳಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜನ ಸದ್ಭಾವನಾ ನಾಗರಿಕ ಸಮಾಜ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.







