ಟೆಕ್ಕಿಗೆ ಕಿಡ್ನಿ ಕಸಿಯ ಸೂಚನೆ ಪಾಲಿಸದ ವಿಚಾರ: ಸಮಿತಿಯ ಅಧಿಕಾರಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ

ಬೆಂಗಳೂರು, ಡಿ.5: ನಗರದ ಟೆಕ್ಕಿಯೊಬ್ಬರಿಗೆ ಕಿಡ್ನಿ ಕಸಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆಯನ್ನು ಪಾಲಿಸದ ಮಾನವ ಅಂಗಾಂಗ ಕಸಿ ಅನುಮತಿ ಸಮಿತಿಯ ಅಧಿಕಾರಿಗೆ ಗುರುವಾರ ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ ನೀಡಿದೆ.
ಕಿಡ್ನಿ ಕಸಿ ಮಾಡಿಸಲು ತನಗೆ ಅನುಮತಿ ನೀಡಲು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಮಾನವ ಅಂಗಾಂಗ ಕಸಿ ಅನುಮತಿ ಸಮಿತಿಗೆ ಮುಖ್ಯಸ್ಥರಿಗೆ ನಿರ್ದೇಶಿಸಬೇಕು. ಹಾಗೆಯೇ, ಕಿಡ್ನಿ ಕಸಿ ಮಾಡಲು ನಾರಾಯಣ ಹೃದಯಾಲಯ, ಸುಗುಣ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಕೊಲಂಬಿಯಾ ಏಷಿಯಾ, ಮಣಿಪಾಲ್ ಆಸ್ಪತ್ರೆಗೆ ನಿರ್ದೇಶಿಸುವಂತೆ ಕೋರಿ ವೈಟ್‌ಫೀಲ್ಡ್ ನಿವಾಸಿಯಾದ ಸಾಫ್ಟ್‌ವೇರ್ ಇಂಜಿನಿಯರ್ ಮೊಹಮ್ಮದ್ ಝೈದ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಡಿ.3ರ ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ಮೊಹಮ್ಮದ್ ಝೈದ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸುವಂತೆ ಮಾನವ ಅಂಗಾಂಗ ಕಸಿ ಅನುಮತಿ ಸಮಿತಿಗೆ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು. ಆದರೆ, ನ್ಯಾಯಾಲಯದ ಸೂಚನೆಯನ್ನು ಸಮಿತಿಯು ಪರಿಗಣಿಸಿರಲಿಲ್ಲ. ಹೀಗಾಗಿ, ಸಮಿತಿಯ ವಿರುದ್ದ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಡಿ.6ರಂದು ಸಮಿತಿಯ ಅಧಿಕಾರಿಗೆ ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಲು ಸೂಚನೆ ನೀಡಿತು.
ಪ್ರಕರಣವೇನು: ಮೊಹಮ್ಮದ್ ಝೈದ್ ಗೆ 2002ರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. 2003ರಲ್ಲಿ ಆತನಿಗೆ ತಾಯಿಯೇ ಕಿಡ್ನಿ ದಾನ ಮಾಡಿದ್ದರು. ಆದರೆ, 2006ರಲ್ಲಿ ಮತ್ತೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ತೀವ್ರ ಶೋಧದ ನಂತರ ಸಂಬಂಧಿ ಮನ್ಸೂರ್ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದರು. ಆದರೆ, ಮನ್ಸೂರು ತಮಗೆ ಹತ್ತಿರದ ಸಂಬಂಧಿಯಲ್ಲ ಎಂಬ ಕಾರಣ ಮುಂದಿಟ್ಟು ಕಿಡ್ನಿ ಕಸಿ ಮಾಡಲು ಪ್ರತಿವಾದಿ ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಆರೋಪಿಸಿರುವ ಝೈದ್, ಕಿಡ್ನಿ ಕಸಿ ಮಾಡಿಸುವುದಕ್ಕೆ ಅನುಮತಿ ನೀಡಲು ರಾಜ್ಯ ಸರಕಾರಕ್ಕೆ ಮತ್ತು ಕಿಡ್ನಿ ಕಸಿ ಮಾಡುವಂತೆ ಪ್ರತಿವಾದಿ ಆಸ್ಪತ್ರೆಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಿದ್ದರು.







