ಬೋಗಿಬೀಲ್-ಭಾರತದ ಅತಿ ಉದ್ದ ರೈಲು-ರಸ್ತೆ ಸೇತುವೆ: ಡಿ. 25ರಂದು ಪ್ರಧಾನಿಯಿಂದ ಉದ್ಘಾಟನೆ

ಹೊಸದಿಲ್ಲಿ, ಡಿ. 4: ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿರುವ ಬ್ರಹ್ಮಪುತ್ರಾ ನದಿಯ ಉತ್ತರ ಹಾಗೂ ದಕ್ಷಿಣ ಭಾಗವನ್ನು ಸಂಪರ್ಕಿಸುವ ಭಾರತದ ಅತಿ ಉದ್ದದ ರೈಲು-ರಸ್ತೆ ಸೇತುವೆ ಬೋಗಿಬೀಲ್ ಸೇತುವೆಯನ್ನು ಪ್ರದಾನಿ ನರೆಂದ್ರ ಮೋದಿ ಡಿಸೆಂಬರ್ 25ರಂದು ಉದ್ಘಾಟಿಸಲಿದ್ದಾರೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸೇತುವೆ 4.94 ಕಿ.ಮೀ. ಉದ್ದವಿದೆ. ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುವ ಡಿಸೆಂಬರ್ 25ರಂದು ಈ ಸೇತುವೆಯನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಗಿಬೀಲ್ ಸೇತುವೆಗೆ 1997 ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಶಂಕು ಸ್ಥಾಪನೆ ನೆರವೇರಿಸಿದ್ದರು. 2002 ಎಪ್ರಿಲ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿ ಉದ್ಘಾಟಿಸಿದ ಬಳಿಕ ಕೆಲಸ ಆರಂಭವಾಗಿತ್ತು. ಕಳೆದ 16 ವರ್ಷಗಳಿಂದ ಹಲವು ಗಡುವುಗಳಲ್ಲಿ ಉದ್ಘಾಟನೆ ನಡೆದಿಲ್ಲ. ಡಿಸೆಂಬರ್ 3ರಂದು ಮೊದಲ ಬಾರಿಗೆ ಅನೌಪಚಾರಿಕವಾಗಿ ಸರಕು ರೈಲೊಂದು ಸಂಚರಿಸಿತ್ತು.
ಅರುಣಾಚಲ ಪ್ರದೇಶದ ಗಡಿಯಲ್ಲಿ ಸರಕಾರ ಸಾಗಾಟ ಸುಧಾರಿಸಲು ಭಾರತ ಯೋಜಿಸಿದ ಮೂಲಭೂತ ಯೋಜನೆಯ ಒಂದು ಭಾಗ ಬೋಗಿಬೀಲ್. ಬ್ರಹ್ಮಪುತ್ರಾದ ಉತ್ತರ ದಂಡೆಯಲ್ಲಿ ಟ್ರಾನ್ಸ್-ಅರುಣಾಚಲ ಹೆದ್ದಾರಿ ನಿರ್ಮಾಣ, ಬ್ರಹ್ಮಪುತ್ರಾ ಹಾಗೂ ದಿಬಾಂಗ್, ಲೋಕಿತ್, ಸುಭಾನ್‌ಸಿರಿ ಹಾಗೂ ಕೆಮಂಗ್‌ನಂತಹ ಅದರ ಪ್ರಮುಖ ಉಪ ನದಿಗಳ ಮೇಲೆ ನೂತನ ರಸ್ತೆ ಹಾಗೂ ರೈಲು ಸಂಪರ್ಕ ನಿರ್ಮಾಣವನ್ನು ಇದು ಒಳಗೊಂಡಿದೆ.





