ಸುಳ್ಯ ಪಿಎಸ್ಸೈಯಿಂದ ಮಾರಣಾಂತಿಕ ಹಲ್ಲೆ ಆರೋಪ: ದೂರು

ಮಂಗಳೂರು, ಡಿ.5: ಸುಳ್ಯ ಪೊಲೀಸ್ ಠಾಣೆಯ ಪಿಎಸ್ಸೈ ಮಂಜುನಾಥ್ ಅವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಾಲೆಂಬಿಯ ಮೇಲ್ಚೆಂಬು ನಿವಾಸಿ ರವೀಂದ್ರ ಗೌಡ ಎಂಬವರು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
‘ಚೆಕ್‌ಬೌನ್ಸ್ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಸ್ಟೇ ಆರ್ಡರ್ ತರಲು ಬೆಂಗಳೂರಿಗೆ ತೆರಳಿದ ಸಂದರ್ಭ ಸುಳ್ಯ ಪೊಲೀಸರು ತನ್ನನ್ನು ಹುಡುಕಾಡಿದ್ದಾರೆ. ತಾನು ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಿಎಸ್ಸೈ ಹಾಗೂ ಇತರ ಸಿಬ್ಬಂದಿ ಠಾಣೆಗೆ ಕರೆದೊಯ್ದು ಅಮಾನುಷವಾಗಿ ಹೊಡೆದು ದೌರ್ಜನ್ಯ ಎಸಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಹಾಕಿ ಸ್ಟಿಕ್ ಹಾಗೂ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದರಿಂದ ದೇಹದ ಮೇಲೆ ರಕ್ತ ಹೆಪ್ಪುಗಟ್ಟಿದೆ. ಈ ಹಲ್ಲೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ನೊಂದಿದ್ದೇನೆ. ಈ ಹಿಂದೆಯೂ ಪಿಎಸ್ಸೈ ಮನೆಗೆ ಬಂದು ತಾಯಿ ಹಾಗೂ ಪತ್ನಿಗೆ ಪಿಸ್ತೂಲು ತೋರಿಸಿ, ಅವನನ್ನು ಎನ್‌ಕೌಂಟರ್ ಮಾಡುತ್ತೇನೆ’ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
‘ಮನೆಯಲ್ಲಿ ಗಾಂಜಾ, ಹೆರಾಯಿನ್ ಇಟ್ಟು ಗಾಂಜಾ ಕೇಸಲ್ಲಿ ಫಿಕ್ಸ್ ಮಾಡುತ್ತೇನೆ. ಕೊಲೆ ಕೇಸಲ್ಲಿ ಫಿಕ್ಸ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಇದರಿಂದ ಮನೆಯಲ್ಲಿ ವಾಸ ಮಾಡಲು ಭಯದ ವಾತಾವರಣ ಉಂಟಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಳ್ಯದ ಪಿಎಸ್ಸೈ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ರವೀಂದ್ರ ಗೌಡ ಅವರು ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜತೆಯನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಡಾ.ಬಿ.ಆರ್.ರವಿಕಾಂತೇ ಗೌಡ
ಎಸ್ಪಿ, ದಕ್ಷಿಣ ಕನ್ನಡ