ಬಿಜೆಪಿ ಅಭ್ಯರ್ಥಿಯಿಂದ ಬಾಲ್ಯವಿವಾಹಕ್ಕೆ ರಕ್ಷಣೆಯ ಭರವಸೆಯ ವರದಿ: ಎನ್‌ಸಿಪಿಸಿರ್‌ನಿಂದ ಪರಿಶೀಲನೆ
ಹೊಸದಿಲ್ಲಿ,ಡಿ.5: ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜಾತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಚೌಹಾಣ್ ಅವರು,ತಾನು ಗೆದ್ದರೆ ಬಾಲ್ಯವಿವಾಹಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುವ ಭರವಸೆಯನ್ನು ಮತದಾರರಿಗೆ ನೀಡಿದ್ದಾರೆಂಬ ವರದಿಗಳನ್ನು ತಾನು ಪರಿಶೀಲಿಸುವುದಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ದ ನೂತನ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ಬುಧವಾರ ಇಲ್ಲಿ ತಿಳಿಸಿದರು.
ಚೌಹಾಣ್ ಅವರು ಈ ಭರವಸೆ ನೀಡಿದ್ದು ಖಚಿತಪಟ್ಟರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇಂತಹ ಹೇಳಿಕೆಯನ್ನು ನೀಡಿದ್ದರೆ ಅದು ತಪ್ಪಾಗುತ್ತದೆ. ವರದಿಯ ಬಗ್ಗೆ ತನಗಿನ್ನೂ ಗೊತ್ತಿಲ್ಲ ಮತ್ತು ಅದು ನಿಜವಾಗಿದ್ದರೆ ಅಭ್ಯರ್ಥಿಯ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕನುಂಗೋ ತಿಳಿಸಿದರು.
ಭವಿಷ್ಯದಲ್ಲಿ ದೇಶದಲ್ಲಿ ಎಲ್ಲ ಬಾಲ್ಯವಿವಾಹಗಳನ್ನು ಅಸಿಂಧುಗೊಳಿಸಲು ತಾನು ಸಂಪುಟಕ್ಕೆ ಪ್ರಸ್ತಾವವನ್ನು ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.