ಜನಾರ್ದನ ಪೂಜಾರಿ ಅವಹೇಳನಕ್ಕೆ ಕಾಂಗ್ರೆಸ್ ಮೌನವೇಕೆ: ಹರಿಕೃಷ್ಣ ಬಂಟ್ವಾಳ್ ಪ್ರಶ್ನೆ

ಬಂಟ್ವಾಳ, ಡಿ. 5: ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿಸಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಒಂದೇ ಒಂದು ಹೇಳಿಕೆ ನೀಡದಿರುವುದು ಯಾಕೆ ? ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸಿದ್ದಾರೆ.
ಬಂಟ್ವಾಳದ ಪಕ್ಷದ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸಿದಂತಹ ಪೂಜಾರಿಯವರಿಗೆ ಎನ್‍ಕೌಂಟರ್ ಮಾಡಿ ಕೊಲ್ಲಬೇಕೆಂದರೂ ಕಾಂಗ್ರೆಸ್‍ನ ರಾಜ್ಯ, ಜಿಲ್ಲಾ, ಇಲ್ಲಿನ ಬ್ಲಾಕ್ ನಾಯಕರು ಚಕಾರ ಎತ್ತದಿರುವುದು ಕಾಂಗ್ರೆಸ್‍ನ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದರು.
ಕಾಂಗ್ರೆಸ್ ಕಾರ್ಯ ಕರ್ತನ ಹೆಸರಿನಲ್ಲಿ ಪೂಜಾರಿಯವರಿಗೆ ಬೆದರಿಕೆ ಒಡ್ಡಿದಾತನ ಮೇಲೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿಯನ್ನು ಅವರು ಒತ್ತಾಯಿಸಿದರು.
ಪೂರ್ಣಾವಧಿ ಬಿಜೆಪಿ ಕಾರ್ಯಕರ್ತ
ತಾನು ಬಿಲ್ಲವ ಮಹಾಮಂಡಲಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಿಲ್ಲವ ಮುಖಂಡನಲ್ಲ. ಈಗ ಪೂರ್ಣಾವಧಿ ಬಿಜೆಪಿ ಕಾರ್ಯಕರ್ತನಾಗಿದ್ದೇನೆ, ವಿಪಕ್ಷ ನಾಯಕರ ಪ್ರೀತಿಗೂ ಪಾತ್ರರಾದ ಪೂಜಾರಿಯವರನ್ನು ಅವಹೇಳನಗೈದಾಗಲೂ ಸುಮ್ಮನಿರಲು ಸಾಧ್ಯವಿಲ್ಲ ಎಂದ ಅವರು ಪೂಜಾರಿಯವರಿಗೆ ಕರೆಮಾಡಿ ಧೈರ್ಯ ತುಂಬಿದ್ದು, ನಿಮ್ಮ ಕೈ, ಕಾಲು ಹಿಡಿದು ಆಶೀರ್ವಾದ ಪಡೆದವರು ಈಗ ಎಲ್ಲಿದ್ದಾರೆಂದು ಕೇಳಿದಾಗ ದೇವರಿದ್ದಾನೆ ಎಂದಷ್ಟೆ ಉತ್ತರಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ, ಜಿ.ಆನಂದ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು, ಸುದರ್ಶನ್ ಬಜ, ಮಹಾಬಲ ಶೆಟ್ಟಿ ಉಪಸ್ಥಿರಿದ್ದರು.