ಮಂಡ್ಯ: ಡಿ.8ರಂದು ಮುಹಮ್ಮದ್ ಪೈಂಗಬರ್ (ಸ) ಕುರಿತು ಸಾರ್ವಜನಿಕ ಸಮ್ಮೇಳನ
ಮಂಡ್ಯ, ಡಿ.5: ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಡಿ.8ರಂದು ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ಅವರ ಕುರಿತು ಸಾರ್ವಜನಿಕ ಸಮ್ಮೇಳನವನ್ನು ಅರಕೇಶ್ವರ ನಗರದಲ್ಲಿನ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ತಜ್ಮುಲ್ ತನ್ವೀರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರು ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕರಾಗಿದ್ದು, ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದಂತೆ ಜನಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಜಮೀಯತೆ ಉಲಮಾ-ಎ-ಹಿಂದ್‍ನ ಕಾರ್ಯದರ್ಶಿ ಹಝ್ರತ್ ಮೌಲಾನ ಮುಫ್ತಿ ಸಂಶುದ್ದೀನ್ ಸಾಹೇಬ್, ಸಿಎಸ್‍ಐ ಸಾಡೆ ಸ್ಮಾರಕ ಚರ್ಚ್‍ನ ಮುಖ್ಯಸ್ಥ ರೆವರೆಂಡ್ ರಾಜ್‍ಕುಮಾರ್.ಎಸ್, ಇಸ್ಲಾಮಿ ಮಾಹಿತಿ ಕೇಂದ್ರದ ಮುಹಮ್ಮದ್ ನವಾಝ್ ಭಾಗವಹಿಸಲಿದ್ದು, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮದ್ ಕುಂಞ ಪ್ರವಚನ ನೀಡಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ಇತರ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್.ಡಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಶೇಖ್ ಉಬೇದುಲ್ಲಾ, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್, ಮೂಡಾ ಮಾಜಿ ಅಧ್ಯಕ್ಷ ಮುನಾವರ್ ಖಾನ್, ಕಾವೇರಿ ಟಿವಿ ಸಂಪಾದಕ ಲಕ್ಷ್ಮಣ್ ಚೀರನಹಳ್ಳಿ, ದಸಂಸ ಮುಖಂಡ ಎಂಬಿ.ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮುಹಮ್ಮದ್ ತಾಹೀರ್, ಅಹಮದ್ ಉಲ್ಲಾ ಹಸನ್, ಮುನಾವರ್ ಖಾನ್, ಖಲೀಂ ಉಲ್ಲಾ, ಮಹಮದ್ ಅಝೀಂ, ರಹಮತ್ ಉಲ್ಲಾ ಉಪಸ್ಥಿತರಿದ್ದರು.







