ಸಂತ ಅಲೋಶಿಯಸ್ ಗೊಂಝಾಗ ಸಿಬಿಎಸ್ಸಿ ಸ್ಕೂಲ್ ಶುಭಾರಂಭ

ಮಂಗಳೂರು, ಡಿ.5: ಸಂತ ಅಲೋಶಿಯಸ್ ಸಂಸ್ಥೆಯ ಸಂತ ಅಲೋಶಿಯಸ್ ಗೊಂಝಾಗ ಸಿಬಿಎಸ್ಸಿ ಸ್ಕೂಲ್ ಕಟ್ಟಡವನ್ನು ನಗರದ ಕೊಡಿಯಾಲ್‌ಬೈಲ್‌ನಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ಕರ್ನಾಟಕ ಜೆಸುಯೆಟ್ ಪ್ರಾಂತದ ರೆ.ಡಾ.ಸ್ಟಾನಿಸ್ಲಾಸ್ ಡಿಸೋಜ ಎಸ್.ಜೆ. ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಸೇವೆ ಸಲ್ಲಿಸಿವೆ. ಸಂತ ಅಲೋಶಿಯಸ್ ಗೊಂಝಾಗ ಸಿಬಿಎಸ್ಸಿ ಸ್ಕೂಲ್ ಕೂಡ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ. ಶಿಕ್ಷಣ ನೀಡುವ ಮೂಲಕ ಯುವ ಜನಾಂಗವನ್ನು ಯಶಸ್ಸಿನತ್ತ ಕರೆದೊಯ್ಯಲಿದೆ. ಸಂಸ್ಥೆಯಲ್ಲಿ ವೌಲ್ಯಯುತವಾದ ಶಿಕ್ಷಣ ದೊರೆಯಲಿದ್ದು, ವಿವಿಧ ಸೌಲಭ್ಯಗಳನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಮಂಗಳೂರು ಪ್ರಾಂತದ ಬಿಷಪ್ ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ, ಸಂತ ಅಲೋಶಿಯಸ್ ಗೊಂಝಾಗ ಮುಂದಿನ ಯುವ ಜನಾಂಗಕ್ಕೆ ಅತ್ಯುತ್ತಮ ಶಿಕ್ಷಣವನ್ನು ನೀಡುವ ಮೂಲಕ ಭದ್ರ ಬುನಾದಿಯನ್ನು ಹಾಕಲಿದೆ. ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಈ ಸಂಸ್ಥೆಗಳು ಸಮಾಜಕ್ಕೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿದ್ದು, ಈಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ವ್ಯಕ್ತಿತ್ವವನ್ನೂ ಸಂಸ್ಥೆ ನೀಡಲಿದೆ. ಇಲ್ಲಿ ಎಲ್ಲ ಧರ್ಮ, ಜಾತಿ, ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಗೊಂಝಾಗ ಸಿಬಿಎಸ್ಸಿ ಸ್ಕೂಲ್ ಕಟ್ಟಡದ ವಿನ್ಯಾಸಕಾರ ಲಾರೆನ್ಸ್, ಕಾಂಟ್ರಾಕ್ಟರ್‌ಗಳಾದ ರಿಚರ್ಡ್, ಹರೀಶ್ ಅವರನ್ನು ಮಂಗಳೂರು ಪ್ರಾಂತದ ಬಿಷಪ್ ಅತಿವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಫಾ.ಡಯೋನಿಶಿಯಸ್ ವಾಝ್ ಎಸ್.ಜೆ., ಮಾಜಿ ರೆಕ್ಟರ್ ಹಾಗೂ ಎಐಎಂಐಟಿಯ ನಿರ್ದೇಶಕ ರೆ.ಫಾ.ಡೆಂಝಿಲ್ ಇ.ಲೋಬೊ ಎಸ್.ಜೆ., ಉಡುಪಿ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಡಿಸೋಜ, ಉದ್ಯಮಿ ಮೈಕಲ್ ಡಿಸೋಜ, ಮಂಗಳೂರು ಜೆಸುಯೆಟ್ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ರೆ.ಫಾ.ಡೆಂಝಿಲ್ ಡಬ್ಲೂ. ಲೋಬೊ ಎಸ್.ಜೆ., ಫಾ.ಜಾಣ್ ಮೆಂಡೊನ್ಸಾ, ಮ್ಯಾನೇಜರ್ ರೆ.ಫಾ.ಮೆಲ್ವಿನ್ ಮೆಂಡೋನ್ಸಾ ಎಸ್.ಜೆ., ಲಾರೆನ್ಸ್ ಕುಟಿನ್ಹ, ಕೆ.ವಿ.ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಗ್ರೇಸ್ ನರೋನ್ಹ ವಂದಿಸಿದರು.