ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವುದು ನನ್ನ ಗುರಿ: ಪರಿಷತ್ ಸದಸ್ಯ ನಸೀರ್ ಅಹ್ಮದ್

ಕೋಲಾರ,ಡಿ.5: ಅಲ್ಪಸಂಖ್ಯಾತರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ನನ್ನ ಬಹುದಿನಗಳ ಗುರಿಯಾಗಿದೆ. ಅಂಬೇಡ್ಕರ್ ಶೋಷಿತ ಸಮಾಜದ ಜನರಿಗೆ ಅಧಿಕಾರ ಪಡೆಯಲು ಸಮಸ್ಯೆ ಎದುರಾಗಬಾರದು ಎಂಬ ಮುಂದಾಲೋಚನೆಯಿಂದ ಮೀಸಲಾತಿ ಕಲ್ಪಿಸಿದ್ದಾರೆ. ಈ ಅವಕಾಶ ಅಲ್ಪಸಂಖ್ಯಾತರಿಗೆ ಇಲ್ಲ. ರಾಜಕೀಯವಾಗಿ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ, ಜಿಲ್ಲಾ ಪರಿಶಿಷ್ಟ ಜಾತಿ ಪಂಗಡಗಳ ಒಕ್ಕೂಟದಿಂದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನನ್ನ ರಾಜಕೀಯ ಜೀವನ ಕೆಜಿಎಫ್‍ನಿಂದ ಆರಂಭವಾಗಿ 40 ವರ್ಷ ಕಳೆದಿದೆ. ದಲಿತ ಮತ್ತು ಅಲ್ಪ ಸಂಖ್ಯಾತರ ಬಾಂಧವ್ಯ ಇತರರಿಗೆ ಮಾದರಿ. ಅಂಬೇಡ್ಕರ್ ಚುನಾವಣೆಯಲ್ಲಿ ಸೋತಾಗ ಅಲ್ಪಸಂಖ್ಯಾರ ನಾಯಕ ತನ್ನ ಸ್ಥಾನ ಬಿಟ್ಟುಕೊಟ್ಟು ಸಂಸತ್‍ಗೆ ಕಳುಹಿಸಿಕೊಟ್ಟಿದ್ದಾರೆ. ನಮ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಬೇಡಿಕೆಯಾಗಿದೆ. ಅಂಬೇಡ್ಕರ್ ಸಮಾಜದಲ್ಲಿ ಸಮಸ್ಯೆ ಎದುರಾಗಬಾರದು ಎಂಬ ಮುಂದಾಲೋಚನೆಯಿಂದ ಮೀಸಲಾತಿ ಕಲ್ಪಿಸಿದ್ದಾರೆ. ಈ ಅವಕಾಶ ಅಲ್ಪಸಂಖ್ಯಾತರಿಗೆ ಇಲ್ಲ. ರಾಜಕೀಯವಾಗಿ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, 'ರಾಷ್ಟ್ರಮಟ್ಟದಿಂದ ಜಿಲ್ಲಾಮಟ್ಟದತನಕ ರಾಜಕೀಯ ವ್ಯವಸ್ಥೆ ಕೆಟ್ಟಿದೆ. ಇದನ್ನು ಇಲ್ಲಿಗೆ ಮಟ್ಟಹಾಕಲು ನಡೆಸುತ್ತಿರುವ ಪ್ರಯತ್ನಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ' ಎಂದು ಭರವಸೆ ನೀಡಿದರು.
ಶಾಸಕ ಕೆ.ಶ್ರೀನಿವಾಸಗೌಡ, ನಸೀರ್ ಅಹ್ಮದ್ ಕೋಲಾರದಲ್ಲಿ ಗಾರ್ಮೆಂಟ್ಸ್ ಆರಂಭಿಸಲು ನಗರದಲ್ಲಿ ತಾಂತ್ರಿಕ ದೋಷದಿಂದ ವಿಳಂಬವಾಗಿತ್ತು, ಅದನ್ನು ಕೆಯುಡಿಎ ದಲ್ಲಿ ಸಭೆ ನಡೆಸಿ ಇತ್ಯರ್ಥಪಡಿಸಿದ್ದು, ಇದರಿಂದ ನಿರುದ್ಯೋಗಿಗಳಿಗೆ ನೆರವಾಗಲಿದೆ' ಎಂದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, 'ಸನ್ಮಾನ ಎಂದರೆ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಅರ್ಥ. ಎಂಎಲ್‍ಸಿಯಾಗಿ ನೇಮಕಗೊಂಡಿರುವ ನಸೀರ್ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ' ಎಂದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಜಿಲ್ಲೆಯ ಪರಿವರ್ತನೆಗೆ ಕೈಗೊಂಡಿರುವ ಪ್ರಯತ್ನಕ್ಕೆ ನನ್ನ ಸಹಕಾರ ಇರುತ್ತದೆ, ನಾನು ಕೂಡಾ ಓರ್ವ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ' ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, 'ನಸೀರ್ ಅಹ್ಮದ್ ಎರಡೂ ಜಿಲ್ಲೆಗಳ ಅಲ್ಪಸಂಖ್ಯಾತರ ಧ್ವನಿಯಾಗಿದ್ದಾರೆ, ರಾಜಕೀಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಕುಮಾರ್ ಹಾಗೂ ನಮ್ಮ ತಂದೆ ಚೌಡರೆಡ್ಡಿಯವರು ಚಾಪು ಮೂಡಿಸಿದ್ದರು' ಎಂದು ಸ್ಮರಿಸಿದರು.
ಮಾಜಿ ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಬಿ.ಪಿ.ವೆಂಕಟಮುನಿಯಪ್ಪ, ದಸಂಸ ಹಿರಿಯ ಮುಖಂಡ, ಸಿ.ಎಂ.ಮುನಿಯಪ್ಪ, ಎನ್. ಮುನಿಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕ ಅನಿಲ್ ಕುಮಾರ್, ಜಿಲ್ಲಾ ಪಂ. ಸದಸ್ಯರಾದ ಶಾಹಿದ್, ಆವಣಿ ಕೃಷ್ಣಪ್ಪ, ವಕ್ಕಲೇರಿ ರಾಜಪ್ಪ, ಕೌನ್ಸಿಲರ್ ಶ್ರೀನಿವಾಸ್, ಮುನಿಆಂಜಿನಪ್ಪ, ಬಾಲಾಜಿ ಚನ್ನಯ್ಯ, ವಾಲ್ಮೀಕಿ ಮುಖಂಡ ಅಂಬರೀಶ್, ವರದೇನಹಳ್ಳಿ ವೆಂಕಟೇಶ್, ಮಾರ್ಜೇನಹಳ್ಳೀ ಬಾಬು ಹಾಜರಿದ್ದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಟ್ಟಿರುವ ದಲಿತ ಚಳುವಳಿಯನ್ನು ಹಾಗೂ ದಲಿತ ಸಮುದಾಯಗಳ ಒಳಪಂಗಡಗಳನ್ನು ಉಪಜಾತಿ ಹೆಸರಿನಲ್ಲಿ ಹೊಡೆದು ಆಳುವ ಶಕ್ತಿಗಳನ್ನು ಸಂಹಾರ ಮಾಡುವುದೇ ಈ ಸಭೆಯ ಉದ್ದೇಶವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ದಲಿತ ಹಾಗೂ ಅಲ್ಪ ಸಂಖ್ಯಾತರ ಧ್ವನಿಯಾಗಿ ಕೆಲಸ ಮಾಡಬೇಕು.
-ಸಿ.ಎಂ.ಮುನಿಯಪ್ಪ, ಅಧ್ಯಕ್ಷ, ಜಿಲ್ಲಾ ಪರಿಶಿಷ್ಟ ಜಾತಿ ಪಂಗಡಗಳ ಒಕ್ಕೂಟ







