ಹಾಕಿ ವಿಶ್ವಕಪ್: ಕಾವರ್ಟರ್‌ಫೈನಲ್‌ನತ್ತ ಜರ್ಮನಿ
ಹಾಲೆಂಡ್ ವಿರುದ್ಧ 4-1 ಅಂತರದ ಗೆಲುವು

ಭುವನೇಶ್ವರ, ಡಿ.5: ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಹಾಲೆಂಡ್ ತಂಡವನ್ನು 4-1 ಅಂತರದಿಂದ ಸದೆಬಡಿದಿರುವ ಎರಡು ಬಾರಿಯ ಚಾಂಪಿಯನ್ ಜರ್ಮನಿ ತಂಡ ಈಗ ನಡೆಯುತ್ತಿರುವ ಪುರುಷ ಹಾಕಿ ವಿಶ್ವಕಪ್‌ನಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇರಿಸಿದೆ.
ಬುಧವಾರ ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಜರ್ಮನಿಯು ಆರಂಭದಲ್ಲಿ ಎದುರಾಳಿ ಹಾಲೆಂಡ್‌ಗೆ ಒಂದು ಗೋಲು ಬಿಟ್ಟುಕೊಟ್ಟಿತು. ತನ್ನ ತಪ್ಪನ್ನು ಬೇಗನೇ ತಿದ್ದಿಕೊಂಡ ಜರ್ಮನಿ ಪರ ಮಥಾಯಸ್ ಮುಲ್ಲರ್(30ನೇ ನಿಮಿಷ), ಲುಕಾಸ್ ವಿಂಡ್‌ಫೆಡೆರ್(52ನೇ ನಿಮಿಷ), ಮಾರ್ಕೊ ಮಿಲ್ಟ್‌ಕಾವ್(54ನೇ ನಿಮಿಷ) ಹಾಗೂ ಕ್ರಿಸ್ಟೋಫರ್ ರುಹರ್(58ನೇ ನಿಮಿಷ)ತಲಾ ಒಂದು ಬಾರಿಸಿದರು. ಈ ಮೂಲಕ ಜರ್ಮನಿ ಟೂರ್ನಿಯ ಡಿ ಗುಂಪಿನಲ್ಲಿ ಸತತ ಎರಡನೇ ಪಂದ್ಯ ಜಯಿಸಲು ನೆರವಾದರು.
ಹಾಲೆಂಡ್ 13ನೇ ನಿಮಿಷದಲ್ಲಿ ವಲೆಂಟಿನ್ ವೆರ್ಗಾ ಗಳಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿ ಜರ್ಮನಿಗೆ ಶಾಕ್ ನೀಡಿತ್ತು. ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಭರ್ಜರಿ ಜಯ ಸಾಧಿಸಿರುವ ಜರ್ಮನಿ ಡಿ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಆರಂಕವನ್ನು ಗಳಿಸಿದೆ. ಹಾಲೆಂಡ್ ಮೂರಂಕವನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ.
ಜರ್ಮನಿ ಟೂರ್ನಿಯಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 1-0 ಅಂತರದಿಂದ ಸೋಲಿಸಿತ್ತು. ಹಾಲೆಂಡ್ ಮಲೇಶ್ಯಾವನ್ನು 7-0 ಅಂತರದಿಂದ ಭರ್ಜರಿಯಾಗಿ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ವಿಶ್ವದ ನಂ.4ನೇ ತಂಡ ಹಾಲೆಂಡ್ ಹಾಗೂ ಆರನೇ ತಂಡ ಜರ್ಮನಿ ನಡುವಿನ ಹೋರಾಟದ ಆರಂಭದಲ್ಲಿ ಡಚ್ಚರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪಂದ್ಯ ಮುಂದುವರಿಯುತ್ತಿದ್ದಂತೆ ಜರ್ಮನಿ ಆಟದಲ್ಲಿ ಹಿಡಿತ ಸಾಧಿಸಿತು. ಹಾಲೆಂಡ್ ನಾಯಕ ಬಿಲ್ಲಿ ಬಕೆರ್ 8ನೇ ನಿಮಿಷದಲ್ಲಿ ಗೋಲು ಗಳಿಸುವ ಉತ್ತಮ ಅವಕಾಶ ಪಡೆದಿದ್ದರು. ಆದರೆ, ಬಕೆರ್ ಹೊಡೆದ ಬಾಲನ್ನು ಜರ್ಮನಿ ಕೀಪರ್ ಟೊಬಿಯಸ್ ತಡೆಹಿಡಿಯಲು ಯಶಸ್ವಿಯಾದರು.
ಸಾಮಾನ್ಯವಾಗಿ ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಹಾಲೆಂಡ್ ಪರ ವೆರ್ಗಾ 13ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಜರ್ಮನಿ ಮೊದಲ ಕ್ವಾರ್ಟರ್‌ನಲ್ಲಿ ಸತತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆಯಿತು. ಕೊನೆಗೂ 30ನೇ ನಿಮಿಷದಲ್ಲಿ ಮುಲ್ಲರ್ ಸೊಗಸಾದ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.
ಹಾಲೆಂಡ್ ಒಂದುಹಂತದಲ್ಲಿ ಎರಡು ನಿಮಿಷಗಳ ಅಂತರದಲ್ಲಕಿ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ,ಎಲ್ಲ ಅವಕಾಶವನ್ನು ವ್ಯರ್ಥ ಮಾಡಿತು.
52ನೇ ನಿಮಿಷದಲ್ಲಿ ವಿಂಡ್‌ಫೆಡರ್ ನಾಲ್ಕನೇ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿ ಜರ್ಮನಿಗೆ 2-1 ಮುನ್ನಡೆ ಒದಗಿಸಿದರು. ಎರಡು ನಿಮಿಷಗಳ ಬಳಿಕ ಜರ್ಮನಿಯ ಮುನ್ನಡೆ 3-1ಕ್ಕೇರಿತು. ಮಿಲ್ಟ್‌ಕಾವ್ 54ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂದ್ಯ ಕೊನೆಗೊಳ್ಳಲು ಇನ್ನು ಕೇವಲ 2 ನಿಮಿಷ ಬಾಕಿ ಇರುವಾಗ ಕ್ರಿಸ್ಟೋಫರ್ ಪೆನಾಲ್ಟಿ ಸ್ಟ್ರೋಕ್‌ನ್ನು ಗೋಲಾಗಿ ಪರಿವರ್ತಿಸಿ ಜರ್ಮನಿಗೆ 4-1 ಗೆಲುವು ತಂದರು.
ಜರ್ಮನಿ 1973 ರಿಂದ 2014ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವಕಪ್ ತನಕ ಅಗ್ರ-4ರಲ್ಲಿ ಸ್ಥಾನ ಪಡೆಯುತ್ತಾ ಬಂದಿದೆ. 1971ರಲ್ಲಿ ಬಾರ್ಸಿಲೋನದಲ್ಲಿ ನಡದ ಮೊದಲ ಆವೃತ್ತಿಯ ವಿಶ್ವಕಪ್ ಹಾಗೂ 2014ರ ವಿಶ್ವಕಪ್‌ನಲ್ಲಿ ಮಾತ್ರ ಅಂತಿಮ-4ರ ಹಂತ ತಲುಪಲು ವಿಫಲವಾಗಿತ್ತು.







