ತಂದೆಯ ಆರೋಗ್ಯ ವಿಚಾರಿಸಲು ಕೇರಳಕ್ಕೆ ಧಾವಿಸಿದ ಶ್ರೀಜೇಶ್

ಭುವನೇಶ್ವರ, ಡಿ.5: ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾಗಿಯಾಗಿರುವ ಭಾರತದ ಹಿರಿಯ ಆಟಗಾರ ಹಾಗೂ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಲು ಭುವನೇಶ್ವರದಿಂದ ತವರು ರಾಜ್ಯ ಕೇರಳಕ್ಕೆ ಧಾವಿಸಿದ್ದಾರೆ. ಕೆನಡಾ ವಿರುದ್ಧ ಡಿ.8ರಂದು ನಡೆಯುವ ಭಾರತದ ಮೂರನೇ ಹಾಗೂ ಅಂತಿಮ ಗ್ರೂಪ್ ಪಂದ್ಯಕ್ಕೆ ಮೊದಲು ಬುಧವಾರ ರಾತ್ರಿ ತಂಡ ಸೇರಿಕೊಳ್ಳಲಿದ್ದಾರೆ. ‘‘ಶ್ರೀಜೇಶ್ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ಕೆನಡಾ ವಿರುದ್ಧ ಪಂದ್ಯಕ್ಕಿಂತ ಮೊದಲು ಸ್ವಲ್ಪ ಬಿಡುವು ಇದ್ದ ಕಾರಣ ಶ್ರೀಜೇಶ್‌ಗೆ ಅವರ ಮನೆಗೆ ತೆರಳಲು ಅನುಮತಿ ನೀಡಲಾಗಿದೆ’’ ಎಂದು ಭಾರತದ ಕೋಚ್ ಹರೇಂದರ್ ಸಿಂಗ್ ಬುಧವಾರ ಬೆಳಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಡಿ.2ರಂದು ಬೆಲ್ಜಿಯಂ ವಿರುದ್ಧ ಪಂದ್ಯ ಕೊನೆಗೊಂಡ ತಕ್ಷಣ ಶ್ರೀಜೇಶ್‌ಗೆ ತನ್ನ ತಂದೆ ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ತಿಳಿಸಲಾಯಿತು. ಪ್ರಮುಖ ಪಂದ್ಯದಲ್ಲಿ ಶ್ರೀಜೇಶ್‌ಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಅವರ ಕುಟುಂಬ ಈ ಸುದ್ದಿಯನ್ನು ಗೌಪ್ಯವಾಗಿಟ್ಟಿತ್ತು. ‘‘ನನ್ನ ತಂದೆ ಹೃದ್ರೋಗಿ. ಅವರಿಗೆ ಕಳೆದ ಒಂದು ವರ್ಷದಿಂದ ಔಷಧಿ ಮಾಡುತ್ತಿದ್ದೇವೆ. ನಿನ್ನೆ ಅವರಿಗೆ ಆ್ಯಂಜಿಯೋಗ್ರಾಫಿ ಚಿಕಿತ್ಸೆ ಆಗಿದೆ. ಭಾರತ ತಂಡಕ್ಕೆ ಕೆನಡಾ ವಿರುದ್ಧ ಪಂದ್ಯಕ್ಕಿಂತ ಮೊದಲು ವಿರಾಮವಿದ್ದ ಕಾರಣ ತಂದೆಯನ್ನು ನೋಡಲು ಸಾಧ್ಯವಾಯಿತು’’ ಎಂದು ಶ್ರೀಜೇಶ್ ಹೇಳಿದ್ದಾರೆ.





