ಆಸ್ಟ್ರೇಲಿಯದಲ್ಲಿ ಸರಣಿ ಜಯ ಬರ ನೀಗಿಸಿಕೊಳ್ಳುವುದೇ ಭಾರತ?
ಇಂದಿನಿಂದ ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಆರಂಭ

ಅಡಿಲೇಡ್, ಡಿ.5: ವಿಶ್ವದ ನಂ.1 ಟೆಸ್ಟ್ ತಂಡ ಭಾರತ ಗುರುವಾರ ಇಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯದ ಸವಾಲು ಎದುರಿಸಲಿದೆ. ಎರಡು ಬಲಿಷ್ಠ ತಂಡಗಳ ನಡುವೆ ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ.
ಭಾರತ ಆಸ್ಟ್ರೇಲಿಯ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಈ ಬಾರಿ ಟೆಸ್ಟ್ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿ ಮೂಡಿಸಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ನಿಷೇಧ ಎದುರಿಸುತ್ತಿದ್ದಾರೆ. ಹೀಗಾಗಿ ಕಳೆದ ವರ್ಷ ಇದೇ ಸಮಯದಲ್ಲಿ ಟೆಸ್ಟ್ ತಂಡಕ್ಕೆ ವಾಪಸಾಗಿರುವ ವಿಕೆಟ್‌ಕೀಪರ್-ದಾಂಡಿಗ ಟಿಮ್ ಪೈನ್ ಈಗ ಆಸ್ಟ್ರೇಲಿಯದ ಸಾರಥ್ಯವಹಿಸಿಕೊಂಡಿದ್ದಾರೆ.
ಆಸ್ಟ್ರೇಲಿಯ ಪಾಳಯದಲ್ಲಿ ಘಟಾನುಘಟಿ ಆಟಗಾರರಿಲ್ಲ. ಸ್ಮಿತ್, ವಾರ್ನರ್ ಅನುಪಸ್ಥಿತಿಯು ತಂಡವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಪಡೆಗೆ ಈ ಬಾರಿ ಸರಣಿ ಜಯಿಸುವ ಅಪೂರ್ವ ಅವಕಾಶವಿದೆ. ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದೇ ಎಂದು ಕಾದುನೋಡಬೇಕಾಗಿದೆ.
2014-15ರಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಕೊಹ್ಲಿ ಒಟ್ಟು 692 ರನ್ ಗಳಿಸಿದ್ದರೆ, ರಹಾನೆ ಒಟ್ಟು 399 ರನ್ ಗಳಿಸಿ ಗಮನ ಸೆಳೆದಿದ್ದರು. ಆದಾಗ್ಯೂ ಭಾರತ 0-2ರಿಂದ ಸರಣಿ ಸೋತಿತ್ತು.
ಕಳಪೆ ತಯಾರಿ ಹಾಗೂ ಕೆಲವು ತಪ್ಪು ನಿರ್ಧಾರಗಳಿಂದಾಗಿ ದಕ್ಷಿಣ ಆಫ್ರಿಕ ಹಾಗೂ ಇಂಗ್ಲೆಂಡ್‌ನಲ್ಲಿ ಈ ವರ್ಷ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತ ಸೋತಿತ್ತು. ಮಾತ್ರವಲ್ಲ ಇತ್ತೀಚೆಗೆ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ವಿರುದ್ಧದ ಚತುರ್ದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್‌ಗಳು 544 ರನ್ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದ್ದರು. ಇದೂ ಸಾಲದೆಂಬಂತೆ ಕನಿಷ್ಠ ಒಂದು ಪಂದ್ಯದಿಂದ ಪ್ರತಿಭಾವಂತ ಆರಂಭಿಕ ಆಟಗಾರ ಪೃಥ್ವಿ ಶಾ ಸೇವೆಯಿಂದ ವಂಚಿತವಾಗಲಿದೆ. ಶಾ ಇದೀಗ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ತಂಡಗಳ ಸುದ್ದಿ...
ಭಾರತ 12 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಗುರುವಾರ ಅಂತಿಮ-11ರ ಬಳಗ ಪ್ರಕಟಿಸಲಿದೆ. ಒಂದು ಸ್ಥಾನಕ್ಕಾಗಿ ಹನುಮ ವಿಹಾರಿ ಹಾಗೂ ರೋಹಿತ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ.
ಬ್ಯಾಟಿಂಗ್ ಆಲ್‌ರೌಂಡರ್ ವಿಹಾರಿ ಈ ವರ್ಷ ಓವಲ್‌ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 56 ಹಾಗೂ 37ಕ್ಕೆ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ರೋಹಿತ್ ಶರ್ಮಾ ದಕ್ಷಿಣ ಆಫ್ರಿಕ ವಿರುದ್ಧ ಜನವರಿಯಲ್ಲಿ ಕೊನೆಯ ಹಾಗೂ ತನ್ನ 25ನೇ ಪಂದ್ಯ ಆಡಿದ್ದರು. 2014-15ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ 6 ಇನಿಂಗ್ ್ಸಗಳಲ್ಲಿ 1 ಅರ್ಧಶತಕ ಸಿಡಿಸಿದ್ದರು.
ಆಸ್ಟ್ರೇಲಿಯ ತಂಡ ಮೊದಲ ಟೆಸ್ಟ್‌ಗೆ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ರನ್ನು ಕೈಬಿಟ್ಟು ಅಚ್ಚರಿಗೊಳಿಸಿದೆ. ಉಸ್ಮಾನ್ ಖ್ವಾಜಾ ತಂಡಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ.
ಮಾರ್ಕಸ್ ಹ್ಯಾರಿಸ್ ಅವರು ಆ್ಯರೊನ್ ಫಿಂಚ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಮೂಲಕ ಟೆಸ್ಟ್ ಕ್ರಿಕೆಟಿಗೆ ಕಾಲಿಡುವುದು ಖಚಿತವಾಗಿದೆ. ಖ್ವಾಜಾ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಭಾರತ ಐದು ಬೌಲರ್‌ಗಳ ನೀತಿಯನ್ನು ಕೈಬಿಟ್ಟಿದ್ದು, ಕೇವಲ ನಾಲ್ವರು ಪ್ರಮುಖ ಬೌಲರ್‌ಗಳನ್ನು ಆಡುವ 12ರ ಬಳಗದಲ್ಲಿ ಉಳಿಸಿಕೊಂಡಿದೆ. ತ್ರಿವಳಿ ವೇಗಿಗಳಾದ ಮುಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಜಸ್‌ಪ್ರಿತ್ ಬುಮ್ರಾ ಅವರು ಆಫ್-ಸ್ಪಿನ್ನರ್ ಆರ್.ಅಶ್ವಿನ್‌ರೊಂದಿಗೆ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. 6ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ಭಾರತದ 12 ಸದಸ್ಯರ ತಂಡ
►ವಿರಾಟ್ ಕೊಹ್ಲಿ(ನಾಯಕ),ಅಜಿಂಕ್ಯ ರಹಾನೆ(ಉಪ ನಾಯಕ), ಕೆಎಲ್ ರಾಹುಲ್, ಎಂ.ವಿಜಯ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್‌ಕೀಪರ್), ಆರ್.ಅಶ್ವಿನ್, ಮುಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರಿತ್ ಬುಮ್ರಾ.
ಪಂದ್ಯದ ಸಮಯ
ಬೆಳಗ್ಗೆ 5:30 ಗಂಟೆಗೆ







