ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ: ಶಿವಮೊಗ್ಗ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್

ಶಿವಮೊಗ್ಗ, ಡಿ. 5: ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಲು ನಾಗರೀಕರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುವುದು' ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ.
ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಕುರಿತಂತೆ ಆಶ್ರಯ ಸಮಿತಿ ಸಭೆಯಲ್ಲಿಯೂ ಚರ್ಚೆಯಾಗಿದೆ. ನಾಗರೀಕರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದಷ್ಟು ಶೀಘ್ರವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಜಿ+2 ಮಾದರಿಯ ಅಪಾರ್ಟ್‍ಮೆಂಟ್ ನಿರ್ಮಿಸಿ, ಮನೆಗಳ ಹಂಚಿಕೆ ಮಾಡಲಾಗುವುದು. ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಕೇಂದ್ರ - ರಾಜ್ಯ ಸರ್ಕಾರಗಳಿಂದ ಸಬ್ಸಿಡಿ ದೊರಕಲಿದೆ. ಬ್ಯಾಂಕ್‍ಗಳ ಮೂಲಕ ಸಾಲಸೌಲಭ್ಯ ಕೂಡ ಲಭ್ಯವಾಗಲಿದೆ. ಅಪಾರ್ಟ್‍ಮೆಂಟ್‍ಗಳಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆದರೆ ಈ ಹಿಂದೆ ಎರಡೂ ಬಾರಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದಾಗಲೂ ನಾಗರೀಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿಲ್ಲ. ಕಾರಣ ತಿಳಿಯದಾಗಿದೆ. ಮನೆಗಳು ಸುಸಜ್ಜಿತವಾಗಿರಲಿವೆ. ವಾಸ ಯೋಗ್ಯವಾಗಿರಲಿವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಅರ್ಹ ವಸತಿರಹಿತರು ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಲ್ಲಿಸಿ: ಇಷ್ಟರಲ್ಲಿಯೇ ಈಗಾಗಲೇ ಆಯ್ಕೆ ಮಾಡಲಾಗಿರುವ ಫಲಾನುಭವಿಗಳಿಂದ ಹಣ ಕಟ್ಟಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಯಾರ್ಯಾರು ಸೂಕ್ತ ದಾಖಲಾತಿ ಸಲ್ಲಿಸಿ, ಹಣ ಕಟ್ಟುತ್ತಾರೋ ಅವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಈ ಕಾರಣದಿಂದ ಫಲಾನುಭವಿಗಳು ಕಾಲಮಿತಿಯಲ್ಲಿ ಹಣ ಕಟ್ಟಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ನಿಗದಿತ ಮೊತ್ತ, ಜಾತಿ ಪ್ರಮಾಣ ಪತ್ರದ ವಿವರಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಆಶ್ರಯ ವಿಭಾಗದ ಅಧಿಕಾರಿ-ಸಿಬ್ಬಂದಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಆಯುಕ್ತೆ ಚಾರುಲತಾ ಸೋಮಲ್‍ರವರು ತಿಳಿಸಿದ್ದಾರೆ.







