ವಿರಾಟ್ ಕೊಹ್ಲಿ ವರ್ಷದ ಶ್ರೀಮಂತ ಕ್ರೀಡಾಪಟು
ಸಚಿನ್, ಧೋನಿ ಹಿಂದಿಕ್ಕಿದ ದಿಲ್ಲಿ ದಾಂಡಿಗ

ಹೊಸದಿಲ್ಲಿ, ಡಿ.5: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿದ ಹಾಲಿ ನಾಯಕ ವಿರಾಟ್ ಕೊಹ್ಲಿ 2018ನೇ ವರ್ಷದ ಅತ್ಯಂತ ಶ್ರೀಮಂತ ಭಾರತೀಯ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ. ಈ ಕುರಿತು ಫೋರ್ಬ್ಸ್ ಇಂಡಿಯಾ ಇತ್ತೀಚೆಗೆ ಘೋಷಣೆ ಹೊರಡಿಸಿದ್ದು ಆ ಪ್ರಕಾರ ಕೊಹ್ಲಿ 2018ರಲ್ಲಿ ಒಟ್ಟು 228.09 ಕೋಟಿ ರೂ. ಗಳಿಸಿ ಸಮಗ್ರ ಸೆಲಿಬ್ರಿಟಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ಅವರ ಒಟ್ಟು ಗಳಿಕೆ 100.72 ಕೋಟಿ ರೂ. ಆಗಿತ್ತು. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಈ ಪಟ್ಟಿಯಲ್ಲಿ ಮತ್ತೊಮ್ಮೆ ಪ್ರಥಮ ಸ್ಥಾನದಲ್ಲಿದ್ದು, 2018ರಲ್ಲಿ ಅವರ ಒಟ್ಟು ಗಳಿಕೆ 235.25 ಕೋಟಿ ರೂ. ಧೋನಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದು, 2018ರಲ್ಲಿ 101.77 ಕೋ.ರೂ ಧೋನಿಯ ಗಳಿಕೆಯಾಗಿದೆ. 80 ಕೋ.ರೂ.ನೊಂದಿಗೆ ತೆಂಡುಲ್ಕರ್ 9ನೇ ಸ್ಥಾನದಲ್ಲಿದ್ದಾರೆ.
2018ರ ಅಗ್ರ 7 ಶ್ರೀಮಂತ ಭಾರತೀಯ ಅಥ್ಲೀಟ್ ಪಟ್ಟಿಯಲ್ಲಿ 6 ಮಂದಿ ಕ್ರಿಕೆಟಿಗರೇ ಇದ್ದು, ಪಿ.ವಿ.ಸಿಂಧು ಮಾತ್ರ ಕ್ರಿಕೆಟಿಗರಲ್ಲದ ಅಥ್ಲೀಟ್ ಆಗಿದ್ದಾರೆ.





