70 ಸ್ಥಾನಗಳಿಗೆ 1,003 ಆಟಗಾರರ ನೋಂದಣಿ
ಹೊಸದಿಲ್ಲಿ, ಡಿ.5: ಜೈಪುರದಲ್ಲಿ ಡಿ.18ರಂದು ನಡೆಯುವ ಇಂಡಿಯನ್ ಪ್ರಿಮೀಯರ್ ಲೀಗ್ ಆಟಗಾರರ ಹರಾಜಿಗೆ ನೋಂದಣಿ ಪ್ರಕ್ರಿಯೆ ಮಂಗಳವಾರ ಕೊನೆಗೊಂಡಿದ್ದು, 232 ವಿದೇಶಿ ಆಟಗಾರರು ಸೇರಿದಂತೆ 1003 ಆಟಗಾರರು ಹೆಸರು ನೋಂದಾಯಿಸಿದ್ದಾರೆ.
ಎಂಟು ಫ್ರಾಂಚೈಸಿಗಳಲ್ಲಿ ಲಭ್ಯವಿರುವ 70 ಸ್ಥಾನಗಳಿಗೆ ನೋಂದಾಯಿಸಿದವರಲ್ಲಿ 200 ಅನುಭವಿ ಆಟಗಾರರು, 800 ಅನನುಭವಿ ಆಟಗಾರರು, ಅಸೋಸಿಯೇಟೆಡ್ ರಾಷ್ಟ್ರಗಳಿಂದ ಮೂವರು ಕ್ರಿಕೆಟಿಗರು ಸೇರಿದ್ದಾರೆ. 800 ಅನನುಭವಿ ಆಟಗಾರರಲ್ಲಿ 746 ಜನ ಭಾರತದವರೇ ಆಗಿರುವುದು ವಿಶೇಷ.
ಐಪಿಎಲ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅರುಣಾಚಲ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿಂ, ಉತ್ತರಾಖಂಡ, ಪುದುಚೇರಿ ರಾಜ್ಯಗಳಿಂದ ಆಟಗಾರರು ಹೆಸರು ನೋಂದಾಯಿಸಿದ್ದು, ಜಗತ್ತಿನ ಅತ್ಯಂತ ದೊಡ್ಡ ದೇಶಿಯ ಟಿ20 ಟೂರ್ನಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡುವ ವಿಶ್ವಾಸದಲ್ಲಿದ್ದಾರೆ.
ಸದ್ಯ ಐಪಿಎಲ್ ಫ್ರಾಂಚೈಸಿಗಳು ಡಿ.10ರವರೆಗೆ ತಮ್ಮ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅವಕಾಶವಿದ್ದು, ಆ ಬಳಿಕ ಅಂತಿಮ ಹರಾಜು ಪಟ್ಟ್ಟಿ ಸಿದ್ಧಪಡಿಸಲಾಗುತ್ತದೆ.







