ಆ ರಾತ್ರಿ ಪ್ರಧಾನಿ ಮೋದಿ ಸುಪ್ರೀಂ ಕೋರ್ಟಿನ ಕೋರ್ಟ್ ನಂ.1ಗೆ ಹೋಗಿದ್ದೇಕೆ ?
ಹೊಸದಿಲ್ಲಿ, ಡಿ.6: ಪ್ರಧಾನಿ ನರೇಂದ್ರ ಮೋದಿ ಒಂದು ವಿಧದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ಇತಿಹಾಸದಲ್ಲಿಯೇ ಸುಪ್ರೀಂ ಕೋರ್ಟಿಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಭಾರತದ ಸುಪ್ರೀಂ ಕೋರ್ಟನ್ನು 60 ವರ್ಷಗಳ ಹಿಂದೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಉದ್ಘಾಟಿಸಿದ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಯಾವುದೇ ಪ್ರಧಾನಿ ತುಳಿದಿರಲಿಲ್ಲ.
ಮೋದಿ ಸುಪ್ರೀಂ ಕೋರ್ಟಿಗೆ ನವೆಂಬರ್ 25ರಂದು ಭೇಟಿ ನೀಡಲು ಕಾರಣ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಆಹ್ವಾನ. ಆ ದಿನ ಆವರು ಬಿಐಎಂಎಸ್‌ಟಿಇಸಿ ದೇಶಗಳಿಗೆ-ಅಂದರೆ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ ಮತ್ತು ಥಾಯ್ಲಂಡ್ ದೇಶಗಳ ನ್ಯಾಯಾಧೀಶರುಗಳಿಗೆ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗಿಯಾಗಲು ಪ್ರಧಾನಿಗೂ ಆಹ್ವಾನವಿತ್ತಿದ್ದರು.
ಸುಪ್ರೀಂ ಕೋರ್ಟಿಗೆ ಮೋದಿ ರಾತ್ರಿ 8 ಗಂಟೆಯ ನಂತರ ಆಗಮಿಸಿದ್ದರು. ನಂತರ ಊಟ ಮಾಡುತ್ತಾ ಹಲವಾರು ನ್ಯಾಯಾಧೀಶರ ಜತೆ ಮೋದಿ ಮಾತನಾಡಿದ್ದರು. ರಾತ್ರಿ 9:30ಕ್ಕೆ ಔತಣ ಕೂಟದ ಸಮಯ ಮುಗಿದಿದ್ದರೂ ಪ್ರಧಾನಿ ಮಾತ್ರ ಅಲ್ಲಿಂದ ಹೊರಡುವ ಸೂಚನೆ ನೀಡಿರಲಿಲ್ಲ.
ಈ ಸಂದರ್ಭ ಪ್ರಧಾನಿ ತಮಗೆ ಕೋರ್ಟ್ ನಂ. 1 ನೋಡಬೇಕೆಂದು ಮುಖ್ಯ ನ್ಯಾಯಮೂರ್ತಿಗಳ ಬಳಿ ಹೇಳಿದಾಗ ಅಚ್ಚರಿಯುಂಟಾಗುವ ಸರದಿ ಗೊಗೊಯಿ ಅವರದ್ದಾಗಿತ್ತು. ಕೇಂದ್ರ ಸಹಿ ಹಾಕಿದ ರಫೇಲ್ ಒಪ್ಪಂದ ಹಾಗೂ ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಕೈಗೊಂಡ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲುಗಳ ವಿಚಾರಣೆ ಸ್ಥಳವನ್ನು ನೋಡಲು ಅವರು ಪ್ರಾಯಶಃ ಬಯಸಿದ್ದರು. ಅಥವಾ ಅವರ ಸ್ನೇಹಿತ, ವಿತ್ತ ಸಚಿವ ಅರುಣ್ ಜೇಟ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾಗ ವಾದಿಸುತ್ತಿದ್ದ ಸ್ಥಳವನ್ನು ಅವರು ನೋಡಲು ಬಯಸಿದ್ದಿರಬಹುದು.
ಮೋದಿಯವರ ಮನವಿಗೆ ಗೊಗೊಯಿ ಸ್ಪಂದಿಸಿ ಕೂಡಲೇ ಸಂಬಂಧಿತ ಬೀಗದ ಕೈ ಗೊಂಚಲುಗಳನ್ನು ಪಡೆದು ಅಲ್ಲಿನ ದೀಪಗಳನ್ನೆಲ್ಲ ಉರಿಸಿ ತಮ್ಮ ಅತಿಥಿಯನ್ನು ಕೋರ್ಟ್ ನಂ. 1ಕ್ಕೆ ಕರೆದೊಯ್ದು ತೋರಿಸಿದರು.
ಮೋದಿ ಅಲ್ಲಿ ಸುತ್ತಾಡಿ ಮೊದಲ ಸಾಲಿನಲ್ಲಿ ಹಿರಿಯ ವಕೀಲರು ಕುಳಿತುಕೊಂಡು ನಂತರ ವಾದ ಮಂಡನೆಗೆ ಎದ್ದು ನಿಲ್ಲುವ ಸ್ಥಳದಲ್ಲಿನ ಕುರ್ಚಿಯಲ್ಲಿ ಸ್ವಲ್ಪ ಸಮಯ ಕುಳಿತರು. ಕೋರ್ಟ್ ನಂ.1ರ ಪದ್ಧತಿಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನೂ ಮೋದಿ ಕೇಳಿದರೆನ್ನಲಾಗಿದೆ. ಆಗ ಮುಖ್ಯ ನ್ಯಾಯಮೂರ್ತಿಗಳು ಒಂದು ಕಪ್ ಚಹಾ ತರಿಸಬೇಕೇ ಎಂದು ಪ್ರಧಾನಿಯ ಬಳಿ ಕೇಳಿದಾಗ ಅವರು ಒಪ್ಪಿದರು. ಹತ್ತು ಗಂಟೆಯ ನಂತರ ಪ್ರಧಾನಿ ಅಲ್ಲಿಂದ ಹೊರ ನಡೆದರು.
ಮೋದಿಯ ರಾಜಕೀಯ ಜೀವನದುದ್ದಕ್ಕೂ ಮೊದಲು ಅವರು ಗುಜರಾತ್ ಮುಖ್ಯಮಂತ್ರಿಯಾಗಿದಾಗ ಹಾಗೂ ನಂತರ ಪ್ರಧಾನಿಯಾದ ಮೇಲೆ ಅವರಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿನ ಹತ್ಯೆಗಳಿಗೆ ಸಂಬಂಧಿಸಿದಂತೆ ಮೋದಿಯ ವಿರುದ್ಧ ಕ್ರಮ ಆಗ್ರಹಿಸಿ ಝಕಿಯಾ ಜಾಫ್ರಿ ದಾಖಲಿಸಿರುವ ಪ್ರಕರಣವೂ ನ್ಯಾಯಾಲಯದಲ್ಲಿದೆ. ಆದರೆ ಈ ಪ್ರಕರಣ ಮುಖ್ಯ ನ್ಯಾಯಮೂರ್ತಿಯವರಿಲ್ಲದ ಬೇರೊಂದು ಪೀಠದ ಮುಂದಿದೆ.