ಬುಲಂದ್ ಶಹರ್ ಹಿಂಸಾಚಾರದ ದಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಬೇಗನೇ ನೀಡಲಾಗಿತ್ತು!

ಬುಲಂದ್‌ಶಹರ್, ಡಿ.6: ಗೋ ಹತ್ಯೆ ವದಂತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 3ರಂದು ಬುಲಂದ್‌ಶಹರ್ ನಲ್ಲಿ ಉದ್ರಿಕ್ತ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಹಾಗೂ ಯುವಕನೊಬ್ಬನನ್ನು ಹತ್ಯೆಗೈದ ದಿನ ಅಲ್ಲಿನ ಪ್ರಾಥಮಿಕ ಮತ್ತು ಜೂನಿಯರ್ ಸೆಕೆಂಡರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನಿಗದಿತಗಿಂತ ಮೊದಲೇ ನೀಡಲಾಗಿತ್ತು. ಸಾಮಾನ್ಯವಾಗಿ 12:30ಕ್ಕೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಅಂದು ಬಹಳಷ್ಟು ಬೇಗ ಅಂದರೆ 11.15ಕ್ಕೇ ಊಟ ನೀಡಲಾಗಿತ್ತು. ತಮಗೆ ಏಕೆ ಬೇಗ ಊಟ ನೀಡಲಾಯಿತೆಂದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ಶಾಲೆಯಿಂದ ಕೇವಲ 100 ಮೀಟರ್ ದೂರದ ಪ್ರದೇಶದಲ್ಲಿ ಹಿಂಸಾಚಾರದ ಸುಳಿವು ವಿದ್ಯಾರ್ಥಿಗಳಿಗಿರಲಿಲ್ಲ.
‘‘ಮಕ್ಕಳಿಗೆ ಆದಷ್ಟು ಬೇಗ ಊಟ ನೀಡಿ ಮನೆಗೆ ಕಳುಹಿಸುವಂತೆ ನಮಗೆ ಆದೇಶ ಬಂದಿತ್ತು’’ ಎಂದು ಅಡುಗೆಯಾಳು ರಾಜಪಾಲ್ ಸಿಂಗ್ ಹೇಳುತ್ತಾರೆ. ಈ ಶಾಲೆಯಲ್ಲಿ ಪ್ರಾಥಮಿಕ ತರಗತಿಗಳಲ್ಲಿ 107 ವಿದ್ಯಾರ್ಥಿಗಳು ಹಾಗೂ ಜೂನಿಯರ್ ಸೆಕೆಂಡರಿ ತರಗತಿಗಳಲ್ಲಿ 66 ವಿದ್ಯಾರ್ಥಿಗಳಿದ್ದಾರೆ. ಬೆಳಗ್ಗೆ 9ರಿಂದ ಅಪರಾಹ್ನ 3 ಗಂಟೆ ತನಕ ಶಾಲೆ ಕಾರ್ಯಾಚರಿಸುತ್ತದೆ.
‘‘ಅಲ್ಲಿ ಇಜ್ತಿಬಾ ನಡೆಯುತ್ತಿರುವುದರಿಂದ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಶಿಕ್ಷಾ ಅಧಿಕಾರಿಯಿಂದ 11 ಗಂಟೆಗೆ ಸಂದೇಶ ಬಂದಿತ್ತು. ಊಟವಾದ ಕೂಡಲೇ ಮಕ್ಕಳನ್ನು ಬೇಗನೇ ಕಳುಹಿಸಲಾಯಿತು. ಕೆಲವು ಮಕ್ಕಳು ಅರ್ಧದಲ್ಲಿಯೇ ಊಟ ಮಾಡಿ ಎದ್ದರೆ ಇನ್ನು ಕೆಲವರು ತಮ್ಮ ಶಾಲಾ ಬ್ಯಾಗುಗಳನ್ನು ಶಾಲೆಯಲ್ಲಿಯೇ ಬಿಟ್ಟು ತೆರಳಿದ್ದರು ಎಂದು ಶಾಲೆಯ ಮುಖ್ಯ ಶಿಕ್ಷಕ ದೇಶರಾಜ್ ಸಿಂಗ್ ಹೇಳುತ್ತಾರೆ.
ಹಿಂಸೆ ನಡೆದ ಸ್ಥಳದಿಂದ ಅನತಿ ದೂರದಲ್ಲಿ ಮೂರು ದಿನದ ಇಜ್ತಿಬಾ ನಡೆಯುತ್ತಿದ್ದು ನೂರಾರು ಜನರು ಅದಕ್ಕಾಗಿ ಆಗಮಿಸಿದ್ದರು. ಶಾಲೆಯ ಪಕ್ಕದ ರಸ್ತೆ ಇದರಿಂದಾಗಿ ವಾಹನಗಳಿಂದ ಕಿಕ್ಕಿರಿದಿತ್ತು. ಮಂಗಳವಾರ ಕೂಡ ಶಾಲೆಗೆ ರಜಾ ನೀಡಲಾಗಿತ್ತು ಆದರೆ ಬುಧವಾರ ಶಾಲೆ ತೆರೆದಾಗ ಯಾವುದೇ ವಿದ್ಯಾರ್ಥಿಗಳು ಆಗಮಿಸಿರಲಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಕಾದು ಹಿಂದಿರುಗಿದ್ದರು.