ಮಂಗಳೂರು: ಯುವಕನ ಅಪಹರಿಸಿ ಮಾರಣಾಂತಿಕ ಹಲ್ಲೆ, ಹಣ ವಸೂಲಿ
ಇಬ್ಬರು ಆರೋಪಿಗಳು ಸೆರೆ

ಮಂಗಳೂರು, ಡಿ. 6: ಐವರು ದುಷ್ಕರ್ಮಿಗಳಿದ್ದ ಗುಂಪೊಂದು ಯುವಕನೋರ್ವನನ್ನು ಅಪಹರಿಸಿ, ಸಸಿಹಿತ್ಲು ಸಮೀಪ ಮಾರಣಾಂತಿಕ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಗೌತಮ್, ಲಾಯ್‌ವೆಗರ್ ಬಂಧಿತ ಆರೋಪಿಗಳು.
ನಗರದ ಫಳ್ನೀರ್ ನಿವಾಸಿ ಶಿಮಾಕ್ ಹಸನ್ (22) ಮಾರಣಾಂತಿಕ ಹಲ್ಲೆಗೊಳಗಾದವರು. ಶಿಮಾಕ್ ನಗರದ ಕಾಲೇಜೊಂದರಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದರು. ಡಿ. 5ರಂದು ಸಂಜೆ ಅತ್ತಾವರದ ಮಳಿಗೆಯೊಂದರಲ್ಲಿ ಶಿಮಾಕ್ ಆತನ ಸ್ನೇಹಿತರಾದ ನಶಾತ್, ಸೌರವ್ ಸೇರಿ ಕಾಫಿ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಶಿಮಾಕ್‌ನ ಕ್ಲಾಸ್‌ಮೇಟ್ ಅಂಕಿತ್, ಸ್ವಲ್ಪ ಕೆಲಸವಿದೆ ಬಾ ಎಂದು ಶಿಮಾಕ್‌ನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.
ಬೈಕ್ ಹೋದ ಅರ್ಧ ಗಂಟೆಯಾದರೂ ಶಿಮಾಕ್ ವಾಪಸಾಗದ ಕಾರಣ ಆತನ ಸ್ನೇಹಿತರು ಮೊಬೈಲ್‌ನ್ನು ಸಂಪರ್ಕಿಸಿದ್ದಾರೆ. ಮೊದಮೊದಲು ಕರೆಯನ್ನು ಸ್ವೀಕರಿಸಿಲ್ಲ. ಬಳಿಕ ಮತ್ತೊಂದು ಮೊಬೈಲ್‌ನಿಂದ ಪ್ರಯತ್ನಿಸಿದಾಗ ದುಷ್ಕರ್ಮಿಗಳು ಕರೆ ಸ್ವೀಕರಿಸಿ, ‘ಶಿಮಾಕ್‌ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಆನಂತರ ರಾತ್ರಿ ವೇಳೆ ದುಷ್ಕರ್ಮಿಗಳು ಕರೆ ಮಾಡಿ, ‘ನಮಗೆ 50 ಸಾವಿರ ರೂ. ಬೇಕು. ಇಲ್ಲದಿದ್ದರೆ ಶಿಮಾಕ್‌ನನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಮತ್ತೆ ಕೆಲವು ಗಂಟೆಗಳ ಬಳಿಕ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಸಂದರ್ಭ ಹಣ ಕೊಡಲು ಕುಟುಂಬಸ್ಥರನ್ನು ಒಪ್ಪಿಸಿ 25 ಸಾವಿರ ರೂ. ಕೊಡಲು ಒಪ್ಪಿದ್ದಾರೆ. ನಗರದ ಕೆಪಿಟಿ ಬಳಿ ದುಷ್ಕರ್ಮಿಗಳಿಗೆ ಬೇಡಿಕೆಯ ಹಣ ತಲುಪಿಸಿದ ತಕ್ಷಣ, ಶಿಮಾಕ್‌ನನ್ನು ಸ್ವಿಫ್ಟ್ ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ಶಿಮಾಕ್‌ನಿಗೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಸಿಗರೇಟ್‌ನಿಂದ ದೇಹದ ಮೇಲೆ ಅಲ್ಲಲ್ಲಿ ಸುಡಲಾಗಿದೆ. ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪಿನಲ್ಲಿದ್ದ ಅಂಕಿತ್ ಸೇರಿದಂತೆ ಇನ್ನು ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಅದರಲ್ಲಿದ್ದ ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.