'ರಸ್ತೆ ಬದಿ ವ್ಯಾಪಾರಿಗಳ ಆರೋಗ್ಯದ ಮೇಲೆ ವಾಯು ಮಾಲಿನ್ಯದ ಪರಿಣಾಮ'
ಸಾರಿಗೆ ಇಲಾಖೆ, ಎಪಿಡಿ ಅಧ್ಯಯನ ವರದಿ ಪ್ರಕಟ

ಮಂಗಳೂರು, ಡಿ. 6: ವಾಹನ ಮಾಲಿನ್ಯದಿಂದ ಪ್ರತಿನಿತ್ಯ ಜನರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಿಳಿಯುವ ಸಲುವಾಗಿ ಮಂಗಳೂರು ಸಾರಿಗೆ ಇಲಾಖೆ (ಆರ್‌ಟಿಒ) ಮತ್ತು ಆ್ಯಂಟಿ ಪೊಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ) ಮಾಡಿದ ಅಧ್ಯಯನದ ಫಲಿತಾಂಶವನ್ನು ‘ಹೊರಾಂಗಣ ಕಾರ್ಮಿಕರ ಆರೋಗ್ಯದ ಮೇಲೆ ವಾಯು ಮಾಲಿನ್ಯದ ಪರಿಣಾಮ’ ಎಂಬ ಸಂಶೋಧನಾ ಲೇಖನದಲ್ಲಿ ದಾಖಲಿಸಿ ನಗರದ ಆರ್‌ಟಿಒ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿದೆ.
ಈ ಸಂಶೋಧನಾ ಲೇಖನದಲ್ಲಿ ಎಪಿಡಿ ತನ್ನ ‘ಶುಧ್ಧ ಗಾಳಿ’ ಯೋಜನೆಯಡಿ ನಡೆಸಿದ ಪಲ್ಮನರಿ ಫಂಕ್ಷನ್ ಟೆಸ್ಟ್ (ಪಿಎಫ್‌ಟಿ)ನ ಫಲಿತಾಂಶಗಳನ್ನು ದಾಖಲಿಸಲಾಗಿದೆ. ಈ ಮೊದಲು ನಡೆಸಿದ ಇಂತಹದೇ ಪರೀಕ್ಷೆಯಲ್ಲಿ ಮಂಗಳೂರಿನ ರಿಕ್ಷಾ ಚಾಲಕರು ಹಾಗೂ ಸಂಚಾರ ಪೊಲೀಸರ ಶ್ವಾಸಕೋಶದ ಮತ್ತು ಉಸಿರಾಟದ ಮೌಲ್ಯಮಾಪನದ ಮುಂದುವರಿದ ಭಾಗವಾಗಿರುವ ಈ ಪರೀಕ್ಷೆಯಲ್ಲಿ ರಸ್ತೆಬದಿ ವ್ಯಾಪಾರಿಗಳ ಆರೋಗ್ಯದ ಮೇಲೆ ವಾಯು ಮಾಲಿನ್ಯದ ಪರಿಣಾಮಗಳ ಪ್ರಮಾಣವನ್ನು ಅಧ್ಯಯನ ಮಾಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಇಲಾಖೆಯ ಹಿರಿಯ ವಿಜ್ಞಾನಿ ಜಯಪ್ರಕಾಶ್ ನಾಯಕ್ ‘ಬಸ್ ಮತ್ತು ರಿಕ್ಷಾಗಳು ವಾಯು ಮಾಲಿನ್ಯಕ್ಕೆ ಅತೀ ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಹೊಗೆಯನ್ನು ಪರೀಕ್ಷೆ ಮಾಡುವ ಕೇಂದ್ರಗಳು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಅತೀ ಹೆಚ್ಚು ಹೊಗೆಯನ್ನು ಹೊರ ಸೂಸುವ ವಾಹನಗಳಿಗೆ ಪ್ರಮಾಣ ಪತ್ರ ನೀಡುವುದನ್ನು ತಡೆಯಬೇಕು’ ಎಂದರು.
ಪ್ರತೀ ವ್ಯಕ್ತಿಗೆ ದಿನವೊಂದರಲ್ಲಿ ಸರಾಸರಿ 3 ಸಿಲಿಂಡರ್ ಆಕ್ಸಿಜನ್ ಬೇಕಾಗುತ್ತದೆ. ಒಂದು ಸಿಲಿಂಡರ್‌ನ ಬೆಲೆ 2,500 ರೂ. ಆಗಿರುತ್ತದೆ. ಅಂದರೆ ವ್ಯಕ್ತಿಯೊಬ್ಬನಿಗೆ ಜೀವಮಾನದಲ್ಲಿ 7.5 ಕೋಟಿ ಮೌಲ್ಯದ ಆಕ್ಸಿಜನ್ ಬೇಕಾಗುತ್ತದೆ. ಒಂದು ಮರವು ನೂರು ಜನರಿಗೆ ಬೇಕಾಗುವಷ್ಟು ಆಕ್ಸಿಜನ್ ಪೂರೈಸುತ್ತದೆ. ಹಾಗಾಗಿ ನಾವು ಮರ ಗಿಡಗಳ ಮಹತ್ವವನ್ನು ಅರಿಯುವುದು ಮತು ಗಿಡಗಳನ್ನು ನೆಟ್ಟು ಬೆಳೆಸುವುದು ಅತ್ಯಗತ್ಯ ಎಂದು ಜಯಪ್ರಕಾಶ್ ನಾಯಕ್ ಹೇಳಿದರು.
ಶ್ವಾಸಕೋಶತಜ್ಞ ಡಾ. ಇರ್ಫಾನ್ ಕಂಡಾಲ್ ಮಾತನಾಡಿ ಈ ಪರೀಕ್ಷೆಯು ಕೇವಲ ಮೊದಲ ಹಂತವಾಗಿದ್ದು ಇನ್ನೂ ಹೆಚ್ಚಿನ ಮಾಹಿತಿಗಾಗಿ ಡಿಎಲ್‌ಸಿಒ ಅಥವಾ ಚೆಸ್ಟ್ ರೇಡಿಯಾಗ್ರಫಿ ಮುಂತಾದ ಪರೀಕ್ಷೆಗಳನ್ನು ಮಾಡಬಹುದಾಗಿದೆ ಎಂದರು.
ಎಪಿಡಿ ಅಧ್ಯಕ್ಷ ಅಬ್ದುಲ್ಲಾ ರೆಹಮಾನ್ ಮಾತನಾಡಿ ‘ಅತೀ ಹೊಗೆ ಹೊರಸೂಸುವ ವಾಹನಗಳು ಸಮಾಜಕ್ಕೆ, ಸಾರ್ವಜನಿಕರ ಆರೋಗ್ಯಕ್ಕೆ ಮತ್ತು ಸಮಾಜದ ಆರ್ಥಿಕತೆಗೆ ಕಂಠಕವಾಗಿವೆ. ಇವುಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಸರಕಾರವು ಇದೇ ರೀತಿಯ ಪರೀಕ್ಷೆಗಳನ್ನು ಕೈಗೊಂಡು ಪರಿಸರ ಮಾಲಿನ್ಯದ ಹಾನಿಯ ಮಟ್ಟವನ್ನು ಅರಿಯಬೇಕು. ಇಂತಹ ಪರೀಕ್ಷೆಗಳನ್ನು ನಡೆಸಲು ಸರಕಾರದ ಜೊತೆಗೂಡಲು ಎಪಿಡಿ ಸಿದ್ಧವಿದೆ’ ಎಂದು ಹೇಳಿದರು.
ಎಪಿಡಿ ವತಿಯಿಂದ ಕೆ.ವಿ.ರಮಣ್, ಸಾರಿಗೆ ಇಲಾಖೆಯ ಗಂಗಾಧರ, ಆರ್‌ಟಿಒ ಜಾನ್ ಮಿಸ್ಕಿತ್ ಮತ್ತು ಪರಿಸರವಾದಿ ಮಾಧವ ಉಳ್ಳಾಲ್ ಮಾತನಾಡಿದರು.
ಪಲ್ಮನರಿ ಫಂಕ್ಷನ್ ಟೆಸ್ಟ್‌ನಲ್ಲಿ ಶೇ.35 ಪ್ರತಿಶತ ನಿರ್ಬಂಧಿತ ಶ್ವಾಸಕೋಶ ಸಾಮರ್ಥ್ಯದ ಫಲಿತಾಂಶ ಲಭಿಸಿದೆ. ಈ ಪರೀಕ್ಷೆಯಲ್ಲಿ 174 ರಸ್ತೆಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು 104 (ಶೇ.59.7) ಅಭ್ಯರ್ಥಿಗಳಲ್ಲಿ ಯಾವುದೇ ತೊಂದರೆ ಇಲ್ಲವೆಂದು ಕಂಡುಬಂದಿತು. ಆದರೆ ಶೇ.61 ಮಂದಿ ಶೇ.35 ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಅದರಲ್ಲಿ 51 ಮಂದಿ ಧೂಮಪಾನ ಮಾಡದಿರುವವರಾಗಿದ್ದರು.