ಉಡುಪಿ: ಸಿಪಿಎಂನಿಂದ ಸಂವಿಧಾನ, ಜಾತ್ಯತೀತತೆ ಸಂರಕ್ಷಣೆಗಾಗಿ ಧರಣಿ

ಉಡುಪಿ, ಡಿ. 6: ದೇಶದ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಗಳಿಂ ಬೇಸತ್ತು ಬಸವಳಿದಿರುವಾಗ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರದ ಭಾಗವಾಗಿ ಆರ್‌ಎಸ್‌ಎಸ್, ಸಂಘ ಪರಿವಾರದ ಶಕ್ತಿಗಳು ಧಾರ್ಮಿಕ ಭಾವನೆಗಳನ್ನು ದುರುಪಯೋಗ ಪಡಿಸುವ ಕೊಳ್ಳಲು ಮುಂದಾಗಿವೆ ಎಂದು ಉಡುಪಿ ಜಿಲ್ಲಾ ಸಿಪಿಐ (ಎಂ)ನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ದೂರಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ಸಿಪಿಎಂ ಆಯೋಜಿಸಿರುವ ದೇಶದ ಸಂವಿಧಾನ ಮತ್ತು ಜಾತ್ಯತೀತೆಯ ಸಂರಕ್ಷಣೆಗಾಗಿ ವಾಹನ ಪ್ರಚಾರ ಹಾಗೂ ಅಜ್ಜರಕಾಡಿನ ಹುತಾತ್ಮರ ಚೌಕದ ಬಳಿ ಆಯೋಜಿಸಲಾದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಧನರಾಗಿ 62 ಹಾಗೂ ಸ್ವತಂತ್ರ ಭಾರತ ಇತಿಹಾಸದ ಕಪ್ಪುಚುಕ್ಕಿ ಎನಿಸಿದ ಬಾಬ್ರಿ ಮಸೀದಿಯ ದ್ವಂಸವಾಗಿ ಇಂದಿಗೆ 26 ವರ್ಷಗಳಾಗಿವೆ. ಭಾರತದ ಸಂವಿಧಾನ ಹಾಗೂ ಜಾತ್ಯತೀತತೆಗೆ ಇಂದು ಎಂದಿಗಿಂತ ಹೆಚ್ಚು ಅಪಾಯ ಎದುರಾಗಿದೆ ಎಂದವರು ನುಡಿದರು.
ರಾಮಮಂದಿರ ನಿರ್ಮಾಣಕ್ಕೆ ಸಿಪಿಎಂ ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಹಾಗೆ ನೋಡಿದರೆ ಮುಸ್ಲಿಂ ಸೇರಿದಂತೆ ಯಾರೊಬ್ಬರೂ ರಾಮಮಂದಿರದ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಅದನ್ನು ನಿರ್ಮಿಸುವ ಬಗ್ಗೆ ಎಲ್ಲರ ವಿರೋಧವಿದೆ. ಈ ಕುರಿತು ವಿವಾದ ಈಗ ಸುಪ್ರೀಂ ಕೋರ್ಟಿನಲ್ಲಿದ್ದು, ಅದರ ತೀರ್ಪಿಗೆ ಬದ್ಧರಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದವರು ನುಡಿದರು.
ಆದರೆ ಉಡುಪಿಯ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ಸೇರಿದಂತೆ ಸಂಘ ಪರಿವಾರದ ಬೆಂಬಲಿಗರೆಲ್ಲರೂ ಮಸೀದಿ ಧ್ವಂಸಗೊಳಿಸಿದ ಜಾಗದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಸಂಸತ್ತು ಶಾಸನ ಅಂಗೀಕರಿಸಬೇಕು ಅಥವಾ ಸುಗ್ರೀವಾಜ್ಞೆ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿರುವುದು ಅತ್ಯಂತ ಖೇಧಕರ ಸಂಗತಿ ಎಂದು ಬಾಲಕೃಷ್ಣ ಶೆಟ್ಟಿ ನುಡಿದರು.
ಭಾರತದ ಸ್ವಾತಂತ್ರ ಹೋರಾಟದ ವೇಳೆ ಎಲ್ಲರೂ ಜಾತಿ, ಮತ, ಧರ್ಮದ ಬೇಧವಿಲ್ಲದೇ ಹೋರಾಡಿದ್ದರು. ಭಾರತಕ್ಕೆ ಜಾತ್ಯತೀತತೆ ಹಾಗೂ ಧರ್ಮನಿರಪೇಕ್ಷತೆಯ ಪರಂಪರೆಯೇ ಇದೆ. ಇದೇ ಅಂಶಗಳನ್ನು ನಮ್ಮ ಸಂವಿಧಾನವೂ ಒತ್ತಿ ಹೇಳಿದೆ. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಈಗ ರಾಮಮಂದಿರದ ವಿಷಯ ಎತ್ತುತ್ತಿರು ವವರು ಮುಖ್ಯ ಉದ್ದೇಶ ಹಿಂದುಗಳ ಮತ ಕ್ರೋಡೀಕರಣವಾಗಿದೆ ಎಂದು ಅವರು ಆರೋಪಿಸಿದರು.
ಸಿಪಿಎಂ ಇಂದು ದೇಶಾದ್ಯಂತ ‘ಸಂವಿಧಾನ ಮತ್ತು ಜಾತ್ಯತೀತತೆಯ ಸಮರ್ಥನೆಯ ದಿನ’ವನ್ನಾಗಿ ಆಚರಿಸುತ್ತಿದೆ. ಈ ಮೂಲಕ ಸಂವಿಧಾನದಲ್ಲಿರುವ ಉದಾತ್ತ ಧ್ಯೇಯಗಳಾದ ಜಾತ್ಯತೀತತೆ, ಆಹಾರದ ಹಕ್ಕು, ಸಾಮಾಜಿಕ ನ್ಯಾಯ, ಸಹೋದರತೆಯನ್ನು ಎತ್ತಿಹಿಡಿದು, ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡುವುದಾಗಿದೆ ಎಂದರು.
ಧರಣಿಯಲ್ಲಿ ಸಿಪಿಎಂ ನಾಯಕರಾದ ವಿಠಲ ಪೂಜಾರಿ, ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಶಶಿಧರ್ ಗೊಲ್ಲ, ಬಲ್ಕೀಶ್ ಬಾನು, ಕೆ.ಲಕ್ಷ್ಮಣ್, ಮಹಾಬಲ ವಡೇರಹೊಬಳಿ ಮುಂತಾದವರು ಉಪಸ್ಥಿತರಿದ್ದರು.