ಬಂಗಾಳದಲ್ಲಿ ಬಿಜೆಪಿ ‘ರಥ ಯಾತ್ರೆ’ಗೆ ಉಚ್ಚ ನ್ಯಾಯಾಲಯ ಅನುಮತಿ ನಿರಾಕರಣೆ
ಕೋಲ್ಕತ್ತಾ, ಡಿ. 6: ರ್ಯಾಲಿ ಜಿಲ್ಲೆಯಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಪಶ್ಚಿಮಬಂಗಾಳ ರಾಜ್ಯ ಸರಕಾರ ಹೇಳಿದ ಬಳಿಕ ಕೂಚ್ ಬೆಹಾರ್ನಿಂದ ಆರಂಭವಾಗಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ‘ರಥ ಯಾತ್ರೆ’ಗೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಗುರುವಾರ ಅನುಮತಿ ನೀಡಲು ನಿರಾಕರಿಸಿದೆ.
ಬಿಜೆಪಿಯ ಕೂಚ್ಬೇರ್ ರಥ ಯಾತ್ರೆ 2019 ಜನವರಿ 9ರಂದು ನಡೆಯಲಿರುವ ಮುಂದಿನ ವಿಚಾರಣೆ ವರೆಗೆ ಮುಂದೂಡಲಾಗಿದೆ. ಬಿಜೆಪಿ ಅಧ್ಯಕ್ಷರ ರಥ ಯಾತ್ರೆಗೆ ಕೂಚ್ ಬೆಹಾರ್ ಪೊಲೀಸ್ ಅಧೀಕ್ಷಕರು ಶುಕ್ರವಾರ ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ರಾಜ್ಯದ ಪರ ನ್ಯಾಯವಾದಿ ಕಿಶೋರ್ ದತ್ತಾ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಪಕ್ಷದ ಮೂರು ರಥಯಾತ್ರೆಗಳನ್ನು ಒಳಗೊಂಡ ‘ಪ್ರಜಾಪ್ರಭುತ್ವ ಉಳಿಸಿ ರ್ಯಾಲಿ’ ಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದರು. ಈ ಆದೇಶದ ವಿರುದ್ಧ ಬಿಜೆಪಿ ನ್ಯಾಯಾಲಯದ ವಿಭಾಗೀಯ ಪೀಠದ ಮೆಟ್ಟಿಲೇರಲಿದೆ. ರ್ಯಾಲಿಯಿಂದ ಕೋಮು ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂದು ರಾಜ್ಯ ಸರಕಾರ ಹೇಳಿದೆ.
ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ನಡೆದ ಚರಿತ್ರೆ ಇದೆ. ಕೆಲವು ಕೋಮುವಾದಿ ಉತ್ತೇಜಕರು ಹಾಗೂ ರೌಡಿಗಳು ಇಲ್ಲಿ ಸಕ್ರಿಯರಾಗಿರುವ ಬಗ್ಗೆ ಮಾಹಿತಿ ಇದೆ ಎಂದು ದತ್ತಾ ಹೇಳಿದ್ದಾರೆ.